ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡುಬಂದ ಲಾರಿಯೊಂದು ಕಾರಿಗೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂರು ಜನರಿಗೆ ಗಾಯವಾದ ಘಟನೆ ಯಲ್ಲಾಪುರ ತಾಲೂಕಿನ ಹಿಟ್ಟಿನಬೈಲ್ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಆರೋಪಿ ಲಾರಿ ಚಾಲಕ ಸೋಲಾಪುರದ ಶಿವಾನಂದ ಮಾಳಪ್ಪ ಗೋಡಕೆ ಎಂಬಾತ ತನ್ನ ಲಾರಿಯನ್ನು ಯಲ್ಲಾಪುರ ಕಡೆಯಿಂದ ಕಲಘಟಗಿ ಕಡೆಗೆ ವೇಗವಾಗಿ ಚಲಾಯಿಸಿಕೊಂಡುಹೋಗಿ, ಹಿಟ್ಟಿನಬೈಲ್ ಕ್ರಾಸ್ ಸಮೀಪ ಮುಂದೆ ಹೋಗುತ್ತಿದ್ದ ಇನ್ನೊಂದು ಲಾರಿಯನ್ನು ಓವರ್ ಟೇಕ್ ಮಾಡಿ ಎಡ ಸೈಡಿಗೆ ಲಾರಿಯನ್ನು ತಿರುಗಿಸಿದ ಪರಿಣಾಮ
ಕಲಘಟಗಿ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ ಕಾರಿಗೆ ಲಾರಿಯು ಡಿಕ್ಕಿಯಾಗಿದೆ. ಈ ಘಟನೆಯಲ್ಲಿ ಕಾರಿನಲ್ಲಿದ್ದ ಯಲ್ಲಾಪುರ ಪಟ್ಟಣದ ಕಾಳಮ್ಮನಗರದ ದಿಲೀಪ ಅಂಬಿಗ, ಇಸ್ಲಾಂಗಲ್ಲಿಯ ಸಾಗರ ತಳೇಕರ್, ಗಣಪತಿಗಲ್ಲಿಯ ಗಣೇಶ ಉಣಕಲ್ ಅವರಿಗೆ ಗಾಯವಾಗಿದೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿ
ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡುಬಂದ ಟ್ಯಾಮಕರ್ ಹೆದ್ದಾರಿಯಲ್ಲಿ ಪಲ್ಟಿಯಾದ ಘಟನೆ ನಡೆದಿದೆ. ಮುಂಬೈನಿಂದ ಅಮೋನಿಯಂ ನೈಟ್ರೇಟ್ ಮೇಟ್ ದ್ರಾವಣವನ್ನು ತುಂಬಿಕೊಂಡು ಉಡುಪಿಗೆ ವೇಗವಾಗಿ ಹೋಗುತ್ತಿದ್ದ ಟ್ಯಾಂಕರ್ ಓವರ್ ಟೇಕ್ ಮಾಡುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಯಲ್ಲಾಪುರ ತಾಲೂಕಿನ ಕಿರವತ್ತಿ ಸಮೀಪದ ಅಲ್ಕೇರಿ ಕ್ರಾಸ್ ಸಮೀಪ ನಡೆದಿದೆ.
ಘಟನೆಯಲ್ಲಿ ಟ್ಯಾಂಕರ್ ವಾಹನ ಜಕಂಗೊಂಡಿದೆ. ಚಾಲಕ ಮಹಮದ್ ಇಮ್ರಾನ್ ಇಂತಜಾರ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.