ಕರಾವಳಿ ಉತ್ಸವದ ಅಂಗವಾಗಿ ಕಾರವಾರದ ಮಾಲಾದೇವಿ ಮೈದಾನದಲ್ಲಿ, ಶನಿವಾರ ಆಯೋಜಸಿದ್ದ ಶ್ವಾನ ಪ್ರದರ್ಶನದಲ್ಲಿ, ಲ್ಯಾಬ್ರಾಡರ್, ಜರ್ಮನ್ ಶೆಪರ್ಡ್, ಗೋಲ್ಡನ್ ರಿಟ್ರಿವರ್, ಮುಧೋಳ ಹೌಂಡ್, ಪೊಮೇರಿಯನ್, ವೇನಸ್ ಕಾರ್ಗಿ, ರಾಜ ಪಾಳ್ಯಮ್, ಬೆಲ್ಜಿಯನ್ ಮೆಲಿನಯ್ಸ್ ಸೇರಿದಂತೆ ವಿವಿಧ ತಳಿಯ ನಾಯಿಗಳು ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಕೈಗಾದ ಕೈಗಾರಿಕಾ ಭದ್ರತಾ ಪಡೆಯ ಶ್ವಾನಗಳು ತಮ್ಮ ಸಾಹಸ, ಬುದ್ದಿವಂತಿಕೆ ಮತ್ತು ಕೌಶಲ್ಯವನ್ನು ಪ್ರದರ್ಶಿಸಿ, ನೆರೆದಿದ್ದ ನೂರಾರು ಸಂಖ್ಯೆಯ ಸಾರ್ವಜನಿಕರನ್ನು ಆಶ್ಚರ್ಯಚಕಿತಗೊಳಿಸಿದವು.

ಪೊಲೀಸ್ ಇಲಾಖೆಯ ಶೈನಿ, ಮಾರ್ವೆಲ್ ಮತ್ತು ಅಖಿರ ಹೆಸರಿನ ಶ್ವಾನಗಳು ಶಿಸ್ತಿನ ಆದೇಶಗಳನ್ನು ಪ್ರದರ್ಶಿಸಿದರೆ ಮತ್ತು ಕೈಗಾರಿಕಾ ಭದ್ರತಾ ಪಡೆಯ ಐರಾ, ಅಭಯ್ ಮತ್ತು ಭೈರವ ಶ್ವಾನಗಳು ರೋಮಾಂಚಕ ಸಾಹಸ ಚಟುವಟಿಕೆಗಳನ್ನು ಪ್ರದರ್ಶಿಸುವ ಮೂಲಕ ಸಾರ್ವಜನಿರ ಮೆಚ್ಚುಗೆಗೆ ಪಾತ್ರವಾದವು, ಈ ಎರಡೂ ಇಲಾಖೆಗಳ ಶ್ವಾನಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ರೂ. 10,000 ಗಳ ನಗದು ಬಹುಮಾನ ನೀಡಿ, ಅಭಿನಂದಿಸಿದರು.

ಬೆಂಗಳೂರಿನಿಂದ ಆಗಮಿಸಿದ್ದ ಕುಮಾರ್ ಅವರ 2 ಶ್ವಾನಗಳು ವಿವಿಧ ಆಕರ್ಷಕ ಬುದ್ದಿವಂತ ಚಟುವಟಿಕೆಗಳನ್ನು ಪ್ರದರ್ಶಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾದವು.
ಶ್ವಾನ ಪ್ರದರ್ಶನದಲ್ಲಿ ಜಿಲ್ಲೆಯ ಮತ್ತು ಹೊರ ಜಿಲ್ಲೆಯ ಶ್ವಾನಗಳು ಭಾಗವಹಿಸಿದ್ದು, ಚಾಂಪಿಯನ್ ವಿಭಾಗದಲ್ಲಿ ವಿಜೇತವಾದ ಶ್ವಾನಗಳಿಗೆ ಮತ್ತು ಪ್ರತಿ ವಿಭಾಗದಲ್ಲೂ ವಿಜೇತವಾದ ಶ್ವಾನಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ನಾಯಿಗಳನ್ನು ಆರೋಗ್ಯಕರವಾಗಿ ಪೋಷಣೆ ಮಾಡುವ ಬಗ್ಗೆ, ಅವುಗಳಿಗೆ ಅಗತ್ಯ ಲಸಿಕೆಗಳನ್ನು ನೀಡುವ ಬಗ್ಗೆ ಪಶು ವೈದ್ಯರು ಮಾಹಿತಿಯನ್ನು ನೀಡಿದರು, ದೇಶಿ ತಳಿಯ ನಾಯಿ ಮರಿಗಳನ್ನು ಉಚಿತವಾಗಿ ದತ್ತು ನೀಡಲು ಸೌಲಭ್ಯ ಕಲ್ಪಿಸಲಾಗಿತ್ತು.

ಶ್ವಾನಗಳ ಸ್ಪರ್ಧೆಯಲ್ಲಿ ಸುನೀಲ್ ಉಡಾಡಿ ಅವರ ಜರ್ಮನ್ ಶೆಫರ್ಡ್ ಶ್ವಾನಕ್ಕೆ ಪ್ರಥಮ ಬಹುಮಾನ ರೂ.25,000, ವೆಂಕಪ್ಪ ನವಲಗಿ ಮುಧೋಳ ಅವರ ಮುಧೋಳ ತಳಿ ಶ್ವಾನಕ್ಕೆ ದ್ವಿತೀಯ ಬಹುಮಾನ ರೂ.15,000 ಮತ್ತು ಸುಹಾಸ್ ದಾವಣಗೆರೆ ಅವರ ಬೀಗಲ್ ತಳಿ ಶ್ವಾನಕ್ಕೆ ತೃತೀಯ ಬಹುಮಾನವಾಗಿ ರೂ.10,000 ನೀಡಲಾಯಿತು.

ಶ್ವಾನ ಪ್ರದರ್ಶನಕ್ಕಾಗಿ ಒಟ್ಟು 118 ಸಂಖ್ಯೆಯ 25 ತಳಿಗಳ ಶ್ವಾನಗಳನ್ನು ನೋಂದಣಿ ಮಾಡಲಾಗಿದ್ದು, ಸ್ಪರ್ಧೆಗೆ 21 ತಳಿಗಳ 52 ನಾಯಿಗಳು ಭಾಗವಹಿಸಿದ್ದು, ಶ್ವಾನ ಮರಿಗಳ ವಿಭಾಗದಲ್ಲಿ 11 ಶ್ವಾನಗಳು ಭಾಗವಹಿಸಿದ್ದವು.

ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯತ್ ಸಿಇಓ ಡಾ.ದಿಲೀಷ್ ಶಶಿ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಪಶುಪಾಲನೆ ಇಲಾಖೆಯ ಉಪನಿರ್ದೇಶಕ ಡಾ.ಮೋಹನ್ ಕುಮಾರ್, ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ್ ಹಾಗೂ ಪಶುಪಾಲನಾ ಇಲಾಖೆಯ ಅಧಿಕಾರಿಗಳು ಶ್ವಾನ ಪ್ರದರ್ಶನವನ್ನು ವೀಕ್ಷಿಸಿ, ಬಹುಮಾನ ವಿತರಿಸಿದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading