ಫೆ.11ರಿಂದ ಫೆ.19ರ ವರೆಗೆ ಯಲ್ಲಾಪುರ ಗ್ರಾಮದೇವಿ ಜಾತ್ರೆಯು ವಿಜೃಂಭಣೆಯಿಂದ ನಡೆಯಲಿದ್ದು, ಜಾತ್ರಾ ಸಿದ್ಧತೆಗಳು ಮುಕ್ತಾಯದ ಹಂತಕ್ಕೆ ಬಂದಿದ್ದು, ಈ ಜಾತ್ರೆಗೆ ಸಕಲ ಸದ್ಭಕ್ತರೂ ಆಗಮಿಸಿ ಗ್ರಾಮದೇವಿಯರ ಕೃಪೆಗೆ ಪಾತ್ರರಾಗಬೇಕು ಎಂದು ದೇವಾಲಯದ ಮ್ಯಾನೇಜಿಂಗ್ ಟ್ರಸ್ಟಿ ರಾಜೇಂದ್ರ ಪ್ರಸಾದ ಭಟ್ ಹೇಳಿದರು.

ಅವರು ರವಿವಾರ ದೇವಿ ಮೈದಾನದ ಜಾತ್ರಾ ಮಂಟಪದಲ್ಲಿ ಜಾತ್ರಾ ಉಸ್ತುವಾರಿ ಪ್ರಮುಖರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಜಾತ್ರಾ ಸಿದ್ಧತೆಯ ವಿವರಗಳನ್ನು ನೀಡಿದರು. ಈಗಾಗಲೇ ಜಾತ್ರಾ ಪೂರ್ವದ ವಿವಿಧ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ನಡೆದಿವೆ. 25 ಲಕ್ಷಕ್ಕೂ ಹೆಚ್ಚು ವೆಚ್ಚದಲ್ಲಿ ಆಕರ್ಷಕ ಜಾತ್ರಾ ಮಂಟಪ ಸಿದ್ಧಗೊಂಡಿದ್ದು, ಸಾಗರದ ಸಾಗರಿಕಾ ಈವೆಂಟ್ಸ್ ನವರು ಜಾತ್ರಾಮಂಟಪ ಸಿದ್ಧಪಡಿಸಿದ್ದಾರೆ.

ಹೋಯ್ಸಳ ಶಿಲ್ಪಕಲಾ ಮಾದರಿಯ ಜಾತ್ರಾಮಂಟಪದಲ್ಲಿ ದಶಾವತಾರ ಹಾಗೂ ನವದುರ್ಗೆಯರ ಕಲಾಕೃತಿಗಳನ್ನು ಅಳವಡಿಸಲಾಗಿದೆ. ಪ್ರಮುಖ ರಸ್ತೆಗಳಲ್ಲಿ ವಿದ್ಯುದ್ದೀಪಾಲಂಕಾರ, ಬಸ್ಟ್ಯಾಂಡ್ ರಸ್ತೆ ಹಾಗೂ ಹುಬ್ಬಳ್ಳಿ ರಸ್ತೆಯಲ್ಲಿ ಭವ್ಯ ಸ್ವಾಗತ ಗೋಪುರ ನಿರ್ಮಾಣವಾಗಲಿದೆ. ಜಾತ್ರಾಮಂಟಪದಲ್ಲಿ ಭದ್ರತೆಗಾಗಿ 18 ಸಿ.ಸಿ.ಕ್ಯಾಮರಾಗಳು, ಭಕ್ತರು ದೇವರ ದರ್ಶನಕ್ಕೆ ಸಾಲಾಗಿ ಸಾಗಲು ಸೂಕ್ತ ವ್ಯವಸ್ಥೆ, ಫ್ಯಾನ್, ಕೂಲರ್ ವ್ಯವಸ್ಥೆ, ಪ್ರಥಮ ಚಿಕಿತ್ಸಾ ಸೌಲಭ್ಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಉಚಿತ ಪಾನಕ ವಿತರಣೆ ಇರಲಿದೆ.

ಜಾತ್ರಾಮಂಟಪದಲ್ಲಿ ಜಾತ್ರಾಮಂಟಪದಲ್ಲಿ ದೇವಾಲಯದ ವತಿಯಿಂದ ಹಣ್ಣುಕಾಯಿ, ಉಡಿ, ಸೀರೆ ಉಡಿ ಮುಂತಾದವು ಲಭ್ಯ ಇರುತ್ತವೆ. ಭಕ್ತರು ಇವುಗಳನ್ನು ಇಲ್ಲಿಂದಲೇ ಪಡೆಯಬೇಕು ಎಂದು ವಿನಂತಿಸಿದ ಅವರು, ಪೂಜಾ ಕೈಂಕರ್ಯಕ್ಕಾಗಿ 50 ಅರ್ಚಕ ವೃಂದ, 25 ಶೆಳೆದೇವ ಸಮಿತಿ ಸದಸ್ಯರು, 50 ಸ್ವಯಂ ಸೇವಕರು, 20 ಶಸ್ತ್ರಧಾರಿ ಪೊಲೀಸರು ನಿರಂತರವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಫೆ.11 ಬುಧವಾರದಂದು ಮಧ್ಯಾಹ್ನ 3.30ರ ನಂತರ ದೇವಾಲಯದಿಂದ ಗ್ರಾಮದೇವಿಯರ ಭವ್ಯ ಮೆರವಣಿಗೆ ಆರಂಭವಗಲಿದೆ. ಮೆರವಣಿಗೆಗೂ ಪೂರ್ವದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಮೆರವಣಿಗೆಯು ಸುಗಮವಾಗಿ ನಡೆಯಲು ಭಕ್ತರು ಸಹಕರಿಸಬೇಕು ಎಂದು ವಿನಂತಿಸಿದ ಅವರು, ಜಾತ್ರೆಯ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.

ಜಾತ್ರಾ ಉಸ್ತುವಾರಿ ಸಮಿತಿಯ ಪ್ರಮುಖರಾದ ಬಾಲಕೃಷ್ಣ ನಾಯಕ ಮಾತನಾಡಿ, ಜಾತ್ರಾಮಂಟಪದಲ್ಲಿ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8.30 ಗಂಟೆಯವರೆಗೆ ಭಕ್ತರು ನಿರಂತರವಾಗಿ ಶ್ರೀದೇವರಿಗೆ ಪೂಜೆ, ಹರಕೆ, ಸೇವೆ ಸಲ್ಲಿಸಲು ಅವಕಾಶವಿದೆ. ಭಕ್ತರ ಅನುಕೂಲಕ್ಕಾಗಿ ಮಹಾಪೂಜಾ ಸೇವೆ, ರೇಷ್ಮೆ ಉಡಿಸೇವೆ ಹಾಗೂ ಶೀಘ್ರದರ್ಶನ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಪ್ರತ್ಯೇಕ ಸೇವಾ ಕೌಂಟರ್ ಮಾಡಲಾಗಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಆಯಗಾರ ಸಮಿತಿಯ ಮುಖ್ಯಸ್ಥ ಮನೋಹರ ಹೆಗಡೆ, ಗೆಳೆಯರ ಬಳಗದ ರವಿ ಶಾನಭಾಗ, ದೇವಾಲಯದ ಅರ್ಚಕ ಪರಶುರಾಮ ಆಚಾರಿ, ವ್ಯವಸ್ಥಾಪಕ ಗೋಪಾಲಕೃಷ್ಣ ಕೊಂಬೆ ಇದ್ದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading