ಬುಧವಾರದಿಂದ ಆರಂಭವಾಗುವ ಗ್ರಾಮದೇವಿ ಜಾತ್ರೆಗೆ ಯಲ್ಲಾಪುರ ಪಟ್ಟಣ ಶೃಂಗಾರಗೊಂಡಿದೆ. ಪಟ್ಟಣದ ವಿವಿಧ ಪ್ರಮುಖ ರಸ್ತೆಗಳಲ್ಲಿ ಬಣ್ಣದ ಪತಾಕೆಗಳು, ರಂಗುರಂಗಿನ ಬಾವುಟಗಳು ಶೋಭಿಸುತ್ತಿವೆ. ರಸ್ತೆಯ ಇಕ್ಕೆಲಗಳಲ್ಲಿ ಭಕ್ತಾದಿಗಳಿಗೆ ಸ್ವಾಗತಕೋರುವ ಪ್ಲೆಕ್ಸ್, ಬಂಟಿಂಗ್ ಗಳನ್ನು ಅಳವಡಿಸಲಾಗಿದೆ.

ಜಾತ್ರಾ ಆಕರ್ಷಣೆಗಳಲ್ಲಿ ಮುಖ್ಯವಾದ ಅಮ್ಯೂಸ್ ಮೆಂಟ್ ಪಾರ್ಕ್ ಗಳು ಸಿದ್ಧಗೊಳ್ಳುತ್ತಿವೆ.

ಪಟ್ಟಣದ ವಾಯ್.ಟಿ.ಎಸ್.ಎಸ್.ಮೈದಾನ, ಶ್ರೀರಾಮ ರೆಸಿಡೆನ್ಸಿ ಹಿಂಭಾಗದಲ್ಲಿ ಹಾಗೂ ಮಾದರಿ ಶಾಲಾ ಆವರಣದಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್ ಗಳು ಸಿದ್ಧಗೊಳ್ಳುತ್ತಿವೆ. ಬೃಹತ್ ತೊಟ್ಟಿಲು, ಜೋಕಾಲಿ ಸೇರಿದಂತೆ ವಿವಿಧ ಪರಿಕರಗಳ ಅಳವಡಿಕೆ ಮುಕ್ತಾಯದ ಹಂತ ತಲುಪಿದೆ.

ದೇವಿ ಮೈದಾನದ ಜಾತ್ರಾ ಮಂಟಪಕ್ಕೆ ಆಕರ್ಷಕ ವಿದ್ಯುದ್ದೀಪಾಲಂಕಾರ ಮಾಡಲಾಗಿದೆ. ಇದು ನೋಡುಗರ ಮನ ಸೆಳೆಯುತ್ತಿದೆ. ಜಾತ್ರಾ ಮಂಟಪದ ನಿರ್ಮಾಣ ಕಾರ್ಯ ಮುಕ್ತಾಯಗೊಂಡಿದೆ.

ಪಟ್ಟಣದ ಬಸ್ ನಿಲ್ದಾನ ರಸ್ತೆ, ಮುಂಡಗೋಡ ರಸ್ತೆ, ಹೆದ್ದಾರಿಯ ಪಕ್ಕದಲ್ಲಿ ಹಾಗೂ ಬಸ್ ನಿಲ್ದಾಣ ರಸ್ತೆ ಮುಂತಾದ ವಿವಿಧ ರಸ್ತೆಗಳ ಅಂಚಿನಲ್ಲಿ ಗುರುತಿಸಲಾದ ತಾತ್ಕಾಲಿಕ ಅಂಗಡಿ ಪ್ಲಾಟ್ ಗಳಲ್ಲಿ ಹೊರ ಊರಿನಿಂದ ಬಂದ ವ್ಯಾಪಾರಿಗಳು ಅಲ್ಲಲ್ಲಿ ಅಂಗಡಿಗಳನ್ನು ಆರಂಭಿಸುವ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಪಟ್ಟಣ ಪಂಚಾಯತಿ ಪೌರ ಕಾರ್ಮಿಕರು ವಿವಿದೆಡೆ ಸ್ವಚ್ಛತಾ ಕಾರ್ಯಕೈಗೊಂಡಿದ್ದಾರೆ.

ಹೆಸ್ಕಾಂ ಕಚೇರಿಯ ಎದುರು ನಾಟಕ ಪ್ರದರ್ಶನಕ್ಕೆ ಟೆಂಟ್ ಹಾಕುವ ಕೆಲಸ ನಡೆದಿದೆ. ನಾಟಕ ಕಂಪನಿಯ ಕಲಾವಿದರಿಂದ ಪ್ರಥಮ ಪ್ರದರ್ಶನವಾಗಿ ಸಂದಿಮನಿ ಸುಂದ್ರಿ ಎಂಬ ಸಾಮಾಜಿಕ ನಾಟಕ ನಡೆಯಲಿದೆ.ಈಗ ಎಲ್ಲೆಡೆ ಜಾತ್ರೆಯದ್ದೇ ಮಾತುಕತೆ ಶುರುವಾಗಿದೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading