ಮನಸ್ವಿನೀ ವಿದ್ಯಾನಿಲಯದಲ್ಲಿ ಯಶಸ್ವಿಯಾಗಿ ನಡೆದ ಸಪ್ತಶಕ್ತಿ ಸಂಗಮ ಕಾರ್ಯಕ್ರಮ
ಸಂಸ್ಕಾರಯುತ ಉತ್ಕೃಷ್ಟ ಶಿಕ್ಷಣಕ್ಕೆ ಹೆಸರಾದ ಯಲ್ಲಾಪುರ ತಾಲೂಕಿನ ಹಿರೇಸರದ ಮನಸ್ವಿನೀ ವಿದ್ಯಾನಿಲಯದಲ್ಲಿ ವಿದ್ಯಾಭಾರತಿ, ಅಖಿಲ ಭಾರತ ಶಿಕ್ಷ ಸಂಸ್ಥಾನ, ವಿದ್ಯಾಭಾರತಿ ಕರ್ನಾಟಕ ಉತ್ತರಕನ್ನಡ ಇವರ ಸಹಯೋಗದಲ್ಲಿ ಸಪ್ತಶಕ್ತಿ ಸಂಗಮ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಮಹಿಳೆಯರಿಂದ ಮಹಿಳೆಯರಿಗಾಗಿಯೇ ನಡೆಸಿದ ಈ ಕಾರ್ಯಕ್ರಮದಲ್ಲಿ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ವೇದಾ ಪುರೋಹಿತ, ವಿದ್ಯಾಭಾರತಿ ಜಂಟಿ ಕಾರ್ಯದರ್ಶಿ ಸುಜಾತಾ ದತ್ತಾರದಾರ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಮನಸ್ವಿನೀ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ರೇಖಾ ಭಟ್ ಕೋಟೆಮನೆ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯರಾದ ಎಸಿಎಫ್ ಹಿಮವತಿ ಭಟ್ ಯಲ್ಲಾಪುರ, ಸಾಮಾಜಿಕ ಕಾರ್ಯಕರ್ತೆ ಸುಜಾತಾ ಸಿದ್ದಿ ಅವರನ್ನು ಗೌರವಿಸಲಾಯಿತು. ಸುಜಾತ ದತ್ತಾರ್ ದಾರ್ ಭಾರತದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಏನು ಎಂಬುದರ ಬಗ್ಗೆ ಮಾತನಾಡಿದರು. ಸನ್ಮಾನಿತರಾದ ಹಿಮವತಿ ಭಟ್ ಹಾಗೂ ಸುಜಾತ ಸಿದ್ದಿ ಅನಿಸಿಕೆಗಳನ್ನು ಹಂಚಿಕೊಂಡರು. ರಸಪ್ರಶ್ನೆ ಕಾರ್ಯಕ್ರಮ ಮತ್ತು ವೇಷಭೂಷಣದೊಂದಿಗೆ ಸಾಧಕ ಮಹಿಳೆಯರ ಪರಿಚಯ ಕಾರ್ಯಕ್ರಮ ನಡೆಯಿತು.
ವೇದಾ ಪುರೋಹಿತ್ ಅವರು ಕುಟುಂಬದ ಅರಿವು ಮತ್ತು ಪರಿಸರದ ಬಗ್ಗೆ ಭಾರತೀಯರ ದೃಷ್ಟಿಕೋನ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಮಾತೆಯರು ಪಾಲ್ಗೊಂಡಿದ್ದರು. ವಿದ್ಯಾಭಾರತೀಯ ವಾರ್ಷಿಕ ಸಂಸ್ಕೃತಗೀತೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಮನಸ್ವಿನೀ ವಿದ್ಯಾನಿಲಯದ ಮುಖ್ಯಾಧ್ಯಾಪಕಿ ಸವಿತಾ ಭಟ್ ಪ್ರಾಸ್ತಾವಿಕ ನುಡಿಯೊಂದಿಗೆ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮಕ್ಕೆ ಬಂದ ಎಲ್ಲಾ ಮಾತೆಯರನ್ನು ಮನಸ್ವಿನೀ ವಿದ್ಯಾನಿಲಯದ ಸಹ ಶಿಕ್ಷಕಿ ಪೂರ್ಣಿಮಾ ಹೆಗಡೆ ಸ್ವಾಗತಿಸಿದರು.
ಕಾರ್ಯಕ್ರಮದ ಪೂರ್ವದಲ್ಲಿ ಮತ್ತು ನಂತರದಲ್ಲಿ ಮಾತೆಯರಿಂದ ಭಗವದ್ಗೀತಾ ಪಠಣ ನಡೆಯಿತು. ಈ ಎಲ್ಲಾ ಕಾರ್ಯಕ್ರಮವನ್ನು ಮನಸ್ವಿನೀ ವಿದ್ಯಾನಿಲಯದ ಎಲ್ಲಾ ಶಿಕ್ಷಕಿಯರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.