ಲಯನ್ಸ್ ಕ್ಲಬ್ ವತಿಯಿಂದ ಯಶಸ್ವಿಯಾಗಿ ನಡೆದ ಉಚಿತ ಡಯಾಬಿಟಿಸ್ ತಪಾಸಣಾ ಶಿಬಿರ
ವಿವಿಧ ಚಟುವಟಿಕೆಗಳ ಮೂಲಕ ನಿರಂತರವಾಗಿ ಸಮಾಜಸೇವೆಯಲ್ಲಿ ತೊಡಗಿರುವ ಯಲ್ಲಾಪುರ ಟೌನ್ ಲಯನ್ಸ್ ಕ್ಲಬ್ ವತಿಯಿಂದ ಪಟ್ಟಣದ ತಾಲೂಕಾ ಆಸ್ಪತ್ರೆಯ ಸಭಾಭವನದಲ್ಲಿ ಡಯಾಬಿಟಿಸ್ ಉಚಿತ ತಪಾಸಣಾ ಶಿಬಿರ ಹಾಗೂ ಸಂವಾದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನೇತ್ರ ತಜ್ಞೆ ಡಾ.ಸೌಮ್ಯಾ ಕೆ.ವಿ. ಮಾತನಾಡಿ, ನಮ್ಮ ಆರೋಗ್ಯದ ಬಗ್ಗೆ ನಿತ್ಯ ಕಾಳಜಿ ವಹಿಸಬೇಕು, ಆರೋಗ್ಯ ಕಾಪಾಡಿಕೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಬಾರದು. ನಾನಾ ಕಾರಣಗಳಿಂದ ಸಕ್ಕರೆ ಕಾಯಿಲೆಯು ಎಲ್ಲೆಡೆ ಹೆಚ್ಚುತ್ತಿದೆ. ಸಕ್ಕರೆ ಕಾಯಿಲೆ ಬರದಂತೆ ನಾವು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು, ಹೆಚ್ಚು ಜಂಕ್ ಫುಡ್ ಸೇವನೆ, ಅತಿಯಾದ ಸಿಹಿ ಪದಾರ್ಥ ಸೇವನೆ ಮಾಡಬಾರದು, ನಿಯಮಿತ ವ್ಯಾಯಾಮ, ಸರಿಯಾದ ಪೌಷ್ಟಿಕ ಆಹಾರ ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಯಲ್ಲಾಪುರ ಟೌನ್ ಲಯನ್ಸ್ ಕ್ಲಬ್ ಅಧ್ಯಕ್ಷ MJF ಶೇಷಗಿರಿ ಪ್ರಭು ಮಾತನಾಡಿ, ಲಯನ್ಸ್ ಕ್ಲಬ್ ಸಂಸ್ಥೆಯು ನಿರಂತರವಾಗಿ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಮುಂದಿನ ದಿನಗಳಲ್ಲಿ ಯಲ್ಲಾಪುರ ತಾಲೂಕಿನಲ್ಲಿ ಇನ್ನಷ್ಟು ಸಮಾಜ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
90ಕ್ಕೂ ಹೆಚ್ಚು ಜನರು ಶಿಬಿರದಲ್ಲಿ ಉಚಿತವಾಗಿ ಸಕ್ಕರೆ ಕಾಯಿಲೆ ತಪಾಸಣೆ ಮಾಡಿಸಿಕೊಂಡರು. ಡಯಾಬಿಟಿಸ್ ತಜ್ಞ ವೈದ್ಯರು ಶಿಬಿರದಲ್ಲಿ ಮಾರ್ಗದರ್ಶನ ಮಾಡಿದರು. ಲಯನ್ಸ್ ಕ್ಲಬ್ ವತಿಯಿಂದ ರೋಗಿಗಳಿಗೆ ಉಚಿತವಾಗಿ ಹಣ್ಣುಹಂಪಲು ವಿತರಿಸಲಾಯಿತು.