ಜಿಲ್ಲೆಯ ಯಾವುದೇ ಸರಕಾರಿ ವೈದ್ಯಕೀಯ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ನೀಡುವ ಔಷಧಗಳ ವಿತರಣೆಯಲ್ಲಿ ಕೊರತೆಯಾಗದಂತೆ ಎಚ್ಚರವಹಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮೀನಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಳಾ ಎಸ್ ವೈದ್ಯ ಸೂಚನೆ ನೀಡಿದರು. ಅವರು ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಸಿ ಮಾತನಾಡಿದರು.

ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಆಸ್ಪತ್ರೆಯ ಹೊರಗಿನಿಂದ ಔಷಧ ಪಡೆಯುವಂತೆ ಚೀಟಿಗಳನ್ನು ವಿತರಿಸಬಾರದು, ಆಸ್ಪತ್ರೆಯಲ್ಲಿ ಔಷಧಗಳ ಕೊರತೆಯಿದ್ದಲ್ಲಿ ಆರೋಗ್ಯ ರಕ್ಷಾ ಸಮಿತಿಯ ಮೂಲಕ ಅಗತ್ಯವಿರುವಷ್ಟು ಔಷಧಗಳನ್ನು ಖರೀದಿಸಿ, ಉಚಿತವಾಗಿ ವಿತರಣೆ ಮಾಡುವಂತೆ ಸೂಚಿಸಿದ ಅವರು, ಕಾರವಾರದ ಮಲ್ಪಿ ಸ್ಪಷಲಿಟಿ ಆಸ್ಪತ್ರೆಗೆ ತಜ್ಞ ವೈದ್ಯರನ್ನು ನೇಮಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಮಕ್ಕಳ ಕೊರತೆಯಿಂದ ಈಗಾಗಲೇ ಮುಚ್ಚಿರುವ ಸರಕಾರಿ ಶಾಲೆಗಳನ್ನು ಸರ್ವೇ ಮಾಡಿಸಿ, ಅವುಗಳನ್ನು ಸ್ಥಳೀಯ ಗ್ರಾಮ ಪಂಚಾಯತ್‍ಗಳಿಗೆ ಹಸ್ತಾಂತರಿಸಬೇಕು, ಮುಚ್ಚಿದ ಶಾಲೆಗಳ ಜಾಗ ಅತಿಕ್ರಮಣವಾದಲ್ಲಿ ಸಂಬಂಧಪಟ್ಟ ಪಂಚಾಯತ್‍ನ ಪಿಡಿಓ ಮತ್ತು ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳನ್ನು ಜವಾಬ್ದಾರನ್ನಾಗಿ ಮಾಡಲಾಗುವುದು. ಶಿಥಿಲಾವಸ್ಥೆಯಲ್ಲಿರುವ ಶಾಲೆಗಳನ್ನು ನಿಯಮಾನುಸಾರ ತೆರವುಗಳಿಸುವಂತೆ ಹಾಗೂ ಶಾಲಾ ಆವರಣದಲ್ಲಿನ ಅಪಾಯಕಾರಿ ಮರ, ವಿದ್ಯುತ್ ತಂತಿಗಳನ್ನು ತೆರವುಗೊಳಿಸಿ ಮಕ್ಕಳಿಗೆ ಎಲ್ಲಾ ರೀತಿಯ ಸುರಕ್ಷತೆ ಇರುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಹಾಗೂ ಈ ಬಾರಿಯ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಜಿಲ್ಲೆಗೆ ಶೇ.100 ಫಲಿತಾಂಶ ಬರುವ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಶಿಕ್ಷಕರು ಕಾರ್ಯನಿರ್ವಹಿಸಬೇಕು, ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಎಲ್ಲಾ ಶಾಸಕರು ತಮ್ಮ ಅನುದಾನವನ್ನು ನೀಡಲಿದ್ದೇವೆ ಎಂದರು.

ಪ್ರಸ್ತುತ ನಡೆಯುತ್ತಿರುವ ದ್ವಿತೀಯ ಪಿಯುಸಿ ಪರೀಕ್ಷೆ ಮತ್ತು ಮುಂಬರುವ ಎಸ್.ಎಸ್.ಎಲ್.ಸಿ ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅನಾನುಕೂಲವಾಗದಂತೆ ಸಾರಿಗೆ ಸಂಸ್ಥೆಯ ಬಸ್‍ಗಳ ಸಂಚಾರ ಸಮರ್ಪಕವಾಗಿ ನಡೆಯಬೇಕು, ಜಿಲ್ಲೆಗೆ ಬಂದಿರುವ ಹೊಸ ಬಸ್ ಗಳನ್ನು ಅಗತ್ಯವಿರುವೆಡೆಗಳಲ್ಲಿ ಕಾರ್ಯಚರಣೆಗೆ ನಿಯೋಜಿಸಬೇಕು, ಕಾರವಾರ- ಬೆಂಗಳೂರು ನಡುವೆ ಬಸ್ ಸ್ಥಗಿತಗೊಳಿಸುವ ಬಸ್ ಸಂಚಾರವನ್ನು ಪುನರಾರಂಭಿಸುವಂತೆ ಸೂಚಿಸಿದರು. ಜಿಲ್ಲೆಯಲ್ಲಿ ಸಾರಿಗೆ ಬಸ್‍ಗಳ ವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು, ಜಿಲ್ಲೆಗೆ ಇದುವರೆಗೆ 104 ಹೊಸ ಬಸ್ ಕೊಟ್ಟಿದ್ದೇವೆ. ಪ್ರಸ್ತುತ ಇನ್ನೂ 20 ಹೊಸ ಬಸ್‍ಗಳು ಬರುತ್ತವೆ. ಸಮಸ್ಯೆಯನ್ನು ಸರಿಯಾಗಿ ನಿರ್ವಹಿಸಿ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯ ಎಲ್ಲ ಕಡೆ ಗುಜರಿ ಬಸ್‍ಗಳು ಓಡಾಡುತ್ತಿವೆ. ಬಸ್‍ಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಕಾರವಾರ, ಅಂಕೋಲಾ ಬಸ್ ಘಟಕಗಳು ದುರ್ಬಲವಾಗಿವೆ ಎಂದು ಎಂಸಿಎ ಅಧ್ಯಕ್ಷ ಹಾಗೂ ಶಾಸಕ ಸತೀಶ ಸೈಲ್ ಆರೋಪಿಸಿದರು.

ಮಳೆಗಾಲದಲ್ಲಿ ಹೆಸ್ಕಾಂ ವತಿಯಿಂದ ವಿದ್ಯುತ್ ಸಂಪರ್ಕ ವ್ಯವಸ್ಥೆ ಹಾಳಾಗುವುದನ್ನು ತಪ್ಪಿಸಲು 24 ಗಂಟೆಯೊಳಗೆ ಟ್ರಾನ್ಸ್ ಫಾರ್ಮರ್ ಮತ್ತು ವಿದ್ಯುತ್ ಕಂಬಗಳ ಜೋಡಣೆ ಮಾಡುವ ರೀತಿಯಲ್ಲಿ ಎಲ್ಲಾ ಅಗತ್ಯ ಸಿದ್ದತೆ, ಉಪಕರಣಗಳ ಲಭ್ಯತೆ ಮತ್ತು ಸಿಬ್ಬಂದಿಗಳನ್ನು ನಿಯೋಜಿಸುವಂತೆ ಸೂಚಿಸಿದ ಅವರು, ಹಳೆಯದಾದ ಮತ್ತು ಅಪಾಯಕಾರಿಯಾಗಿರುವ ವಿದ್ಯುತ್ ತಂತಿಗಳ ತೆರವು ಮತ್ತು ಬದಲಾವಣೆ ಕಾಮಗಾರಿಗಳನ್ನು ನಿಗಧಿತ ಅವಧಿಯೊಳಗೆ ಮುಕ್ತಾಯಗೊಳಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ವ್ಯಾಪಕವಾಗಿ ವಿರೋಧ ವ್ಯಕ್ತವಾಗುತ್ತಿರುವ ಬೇಡ್ತಿ- ವರದಾ, ಅಘನಾಶಿನಿ- ವೇದಾವತಿ ನದಿ ಜೋಡಣೆ ಯೋಜನೆಯನ್ನು ವಿರೋಧಿಸಿ ಸಭೆಯಲ್ಲಿ ನಿರ್ಣಯ ಕೈಗೊಳ್ಳುವಂತೆ ಪ್ರಸ್ತಾಪಿಸಿ ಶಿರಸಿ ಶಾಸಕ ಭೀಮಣ್ಣ ನಾಯ್ಕ್ ಒತ್ತಾಯಿಸಿದರು, ಉಸ್ತುವಾರಿ ಸಚಿವರೂ ಕೂಡಾ ಈ ಪ್ರಸ್ತಾವನೆಗೆ ತಮ್ಮ ಒಪ್ಪಿಗೆ ಸೂಚಿಸಿ ಅನುಮೋದನೆ ನೀಡಿದರು.

ಜಿಲ್ಲೆಯಲ್ಲಿನ ಜಲಪಾತಗಳ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರ ಜೀವಹಾನಿಯಾಗುತ್ತಿದ್ದು, ಈ ಸ್ಥಳಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳು, ಮುನ್ನೆಚ್ಚರಿಕ ಸೂಚನಾ ಫಲಕಗಳು ಮತ್ತು ಹೋಂ ಗಾರ್ಡ್‍ಗಳನ್ನು ನಿಯೋಜಿಸಬೇಕು, ಹಾವೇರಿ-ಶಿರಸಿ ರಸ್ತೆ ಕಾಮಗಾರಿಯಿಂದ ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಧೂಳಿನಿಂದ ನರಳುತ್ತಿದ್ದು, ಈ ಕಾಮಗಾರಿ ಅವ್ಯವಸ್ಥೆಯಿಂದ ಕೂಡಿದ್ದು, ಪ್ರಸ್ತುತ ಕಿತ್ತು ಹಾಕಿರುವ ರಸ್ತೆಯನ್ನು ಆದ್ಯತೆಯಲ್ಲಿ ನಿರ್ಮಾಣ ಮಾಡುವಂತೆ ಭೀಮಣ್ಣ ನಾಯ್ಕ್ ಒತ್ತಾಯಿಸಿದರು.
ಹಾಸ್ಟೆಲ್ ಗಳಲ್ಲಿ ಪ್ರವೇಶ ಕೋರುವ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು, ಪ್ರವೇಶ ಪ್ರಕ್ರಿಯೆಯನ್ನು ಅದಷ್ಟು ಮುಂಚಿತವಾಗಿ ಆರಂಭಿಸಬೇಕು ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ಮೂಲಭೂತ ಸೌಲಭ್ಯಗಳ ಕೊರತೆಯಾಗದಂತೆ ಎಚ್ಚರವಹಿಸಬೇಕು ಎಂದರು.

ಬೇಸಿಗೆಯಲ್ಲಿ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ನೀರಿನ ಕೊರತೆಯಾಗದÀಂತೆ ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು, ಕುಡಿಯುವ ನೀರು ಕಲುಷಿತಗೊಳ್ಳದಂತೆ ನಿಯಮಿತವಾಗಿ ಲ್ಯಾಬ್ ಗಳಲ್ಲಿ ಪರೀಕ್ಷೆಗೆ ಒಳಪಡಿಸಬೇಕು, ಜಾನುವಾರುಗಳಿಗೆ ಮೇವಿನ ಕೊರತೆಯಾಗಬಾರದು, ನೀರಿನ ಮೂಲ ಇರುವ ಕಡೆಗಳಲ್ಲಿ ಮಾತ್ರ ಜಲ ಜೀವನ್ ಮಿಷನ್ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಂತೆ ತಿಳಿಸಿದರು.

ಸಭೆಯಲ್ಲಿ ಮಳೆ ಮಾಪನ ಯಂತ್ರಗಳ ದುರಸ್ತಿ ಮತ್ತು ಕಾರ್ಯನಿರ್ವಹಣೆ, ಆಟೋಗಳಿಗೆ ಪರ್ಮಿಟ್ ನೀಡುವ ಬಗ್ಗೆ, ಬೆಳೆ ವಿಮೆ ಪಾವತಿ ಬಗ್ಗೆ, ಪ್ರಾಕೃತಿಕ ವಿಕೋಪ ತಡೆ ಕಾಮಗಾರಿಗಳನ್ನು ನಿಗಧಿತ ಅವಧಿಯಲ್ಲಿ ಮುಕ್ತಾಯಗೊಳಿಸುವ ಬಗ್ಗೆ, ಅತಿಕ್ರಮಣ ಜಮೀನುಗಳ ಜಿ.ಪಿ.ಎಸ್ ಸರ್ವೇ ಕಾರ್ಯದ ಬಗ್ಗೆ ಚರ್ಚೆ ನಡೆಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ, ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ್ ಹಾಗೂ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಇದ್ದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading