


ಮಳೆಮಾಪನ ಯಂತ್ರಗಳ ಸ್ಥಿತಿಗತಿಯ ಬಗ್ಗೆ ವರದಿ ನೀಡಲು ಶಾಸಕ ಶಿವರಾಮ ಹೆಬ್ಬಾರ್ ಸೂಚನೆ

ಯಲ್ಲಾಪುರ ತಾಲೂಕಿನಲ್ಲಿ ಮಳೆಮಾಪನ ಯಂತ್ರಗಳ ಸದ್ಯದ ಸ್ಥಿತಿಗತಿಯ ಬಗ್ಗೆ ಹದಿನೈದು ದಿನಗಳ ಒಳಗಾಗಿ ತಮಗೆ ವರದಿ ನೀಡಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ್ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಲೂಕಾ ಪಂಚಾಯತಿ ಸಭಾಭವನದಲ್ಲಿ ಬುಧವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರಿಯಾಗಿ ಬೆಳೆ ವಿಮೆ ದೊರೆಯಲು ಮಳೆಮಾಪನ ಯಂತ್ರಗಳು ಸುಸ್ಥಿಯಲ್ಲಿ ಇರಬೇಕಾಗಿರುವುದು ಅಗತ್ಯವಾಗಿದೆ. ತಾಲೂಕಿನಲ್ಲಿರುವ ಮಳೆ ಮಾಪನ ಯಂತ್ರಗಳಲ್ಲಿ ಎಷ್ಟು ಹಾಳಾಗಿವೆ, ಎಷ್ಟು ಸುಸ್ಥಿತಿಯಲ್ಲಿವೆ, ಹಾಳದ ಯಂತ್ರಗಳ ದುರಸ್ತಿಗೆ ಯಾವ ಕ್ರಮ ಕೈಗೊಳ್ಳಬೇಕು ಮುಂತಾದವುಗಳ ಬಗ್ಗೆ ವಾಸ್ತವಿಕ ವರದಿಯನ್ನು ಹದಿನೈದು ದಿನಗಳ ಒಳಗಾಗಿ ನೀಡಬೇಕು.
ಇದನ್ನೂ ಓದಿ: ಗುರುವಾರ ಯಲ್ಲಾಪುರದಲ್ಲಿ ಉದ್ಘಾಟನೆಗೊಳ್ಳಲಿದೆ ಅತ್ಯಾಧುನಿಕ ಹೋಟೆಲ್ ಅಯೋಧ್ಯ ವೆಸ್ಟೆರ್ನ್ ಸ್ಟೇ

ತಹಶೀಲ್ದಾರ್ ನೇತ್ರತ್ವದಲ್ಲಿ ತೋಟಗಾರಿಕೆ, ಕೃಷಿ, ಕಂದಾಯ ಇಲಾಖೆಯ ಅಧಿಕಾರಿಗಳು ಮಳೆಮಾಪನ ಯಂತ್ರಗಳ ಖುದ್ದು ಪರಿಶೀಲನೆ ನಡೆಸಿ ವರದಿ ನೀಡಬೇಕು, ಹಾಳಾದ ಯಂತ್ರಗಳ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ಮಾತನಾಡಿ, ತಾಲೂಕಿಗೆ ಈಬಾರಿ ಒಟ್ಟೂ ಹತ್ತು ಕೋಟಿ ರೂ ಬೆಳೆ ವಿಮೆ ಬಂದಿದೆ. ತಾಲೂಕಿನಲ್ಲಿ ಒಟ್ಟೂ 18 ಮಳೆಮಾಪನ ಯಂತ್ರಗಳು ಇವೆ. ಇವುಗಳಲ್ಲಿ 12 ಮಳೆ ಮಾಪನ ಯಂತ್ರಗಳು ಹಾಳಾಗಿವೆ, 6 ಯಂತ್ರಗಳು ಸರಿಯಾಗಿವೆ. ಈಬಾರಿ ಎಲೆಚುಕ್ಕಿ ರೋಗದಿಂದ ಒಟ್ಟೂ 2312 ಹೆಕ್ಟೆರ್ ಅಡಿಕೆ ತೋಟ ಹಾನಿಗೊಳಗಾಗಿದ್ದು, ಒಂದು ಎಕರೆಗೆ 600 ರೂ ನಂತೆ 918 ಜನರಿಗೆ ಒಟ್ಟೂ 21 ಲಕ್ಷ ರು ಪರಿಹಾರವನ್ನು ಒದಗಿಸಲಾಗಿದೆ ಎಂದರು.

ತಾಲೂಕಾ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್ ಮಾತನಾಡಿ, ತಾಲೂಕಾ ಆಸ್ಪತ್ರೆಯಲ್ಲಿ ಹೆರಿಗೆ ತಜ್ಞ ವೈದ್ಯರ, ಅನಸ್ತೇಶಿಯಾ ತಜ್ಞವೈದ್ಯರ ಹುದ್ದೆ ಖಾಲಿ ಇದೆ. ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ವೈದ್ಯರ ಕೊರತೆ ಇದೆ ಎಂದರು. ತಾಲೂಕಿನಲ್ಲಿ ಜಲನಿರ್ಮಲ ಮಿಷನ್ ಯೋಜನೆಯು ಸರಿಯಾಗಿ ಅನುಷ್ಠಾನವಾಗುತ್ತಿಲ್ಲ ಎಂದು ಸಭೆಯಲ್ಲಿದ್ದ ಸಾರ್ವಜನಿಕರು ಶಾಸಕರ ಗಮನಕ್ಕೆ ತಂದರು.

ಜೆಜೆಎಂ ಯೋಜನೆಯನ್ನು ಜನರಿಗೆ ಅನುಕೂಲವಾಗುವಂತೆ ಸರಿಯಾಗಿ ಜಾರಿಗೊಳಿಸಬೇಕು, ಸಮಸ್ಯೆ ಇರುವಲ್ಲಿ ಭೆಟಿನೀಡಿ ಪರಿಶೀಲನೆ ನಡೆಸಿ, ಕಾಮಗಾರಿ ವಿಳಂಬವಾಗದಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಜೆಜೆಎಂ ಅಧಿಕಾರಿಗೆ ಸೂಚಿಸಿದರು. ತಾಲೂಕಿನ ಮಾವಿನಮನೆ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ರೋಗದ ಬಗ್ಗೆ ಆರೋಗ್ಯ ಸಮೀಕ್ಷೆ ನಡೆಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸುವಂತೆ ಸಭೆಯಲ್ಲಿ ಠರಾವು ಮಾಡಲಾಯಿತು.

ಹೊಸದಾಗಿ ಅರಣ್ಯ ಅತಿಕ್ರಮಣಕ್ಕೆ ಅವಕಾಶವಿಲ್ಲ. ಹಳೆಯ ಅತಿಕ್ರಮಣದಾರರಿಗೆ ತೊಂದರೆ ನೀಡದಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ತಾ.ಪಂ.ಆಡಳಿತಾಧಿಕಾರಿ ಕೆ.ಎಚ್.ಪಾಂಡು, ತಹಶೀಲ್ದಾರ್ ಚಂದ್ರಶೇಖರ ಹೊಸಮನಿ, ತಾ.ಪಂ. ಇಒ ರಾಜೇಶ ಧನವಾಡಕರ್, ಜಿ.ಪಂ.ಮಾಜಿ ಸದಸ್ಯ ವಿಜಯ ಮಿರಾಶಿ, ನಾಮನಿರ್ದೇಶಿತ ಸದಸ್ಯರಾದ ಪ್ರಶಾಂತ ಸಭಾಹಿತ, ರಾಧಾ ಹೆಗಡೆ, ದ್ಯಾಮಣ್ಣ ಭೊವಿವಡ್ಡರ್, ಎಂ.ಡಿ.ಗೌಸ್, ಲಾರೆನ್ಸ್ ಸಿದ್ದಿ ಮುಂತಾದವರು ಇದ್ದರು.
ಫಲಾನುಭವಿಗಳಿಗೆ ಸೌಲಭ್ಯ ವಿತರಣೆ

ಶಾಸಕ ಶಿವರಾಮ ಹೆಬ್ಬಾರ್ ಅವರು ಬುಧವಾರ ಪಟ್ಟಣದ ಗಾಂಧಿ ಕುಟೀರದಲ್ಲಿ ಅರ್ಹ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಿದರು. ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು,

ತ್ರಿಚಕ್ರ ಮೋಟಾರ್ ವಾಹನಗಳನ್ನು, ಟಿಲ್ಲರ್, ನೀರಿನ ಪೈಪ್, ಮೀನು ಬಲೆ, ಕೃಷಿ ಪರಿಕರ ಮುಂತಾದವುಗಳನ್ನು ವಿತರಿಸಲಾಯಿತು. ಉತ್ತಮ ಕೃಷಿಕ ಪ್ರಶಸ್ತಿಯನ್ನು ವಿತರಿಸಲಾಯಿತು.

ತೋಟದಲ್ಲಿ ಕೃಷಿ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬದ ಸದಸ್ಯರಿಗೆ ಶಾಸಕ ಶಿವರಾಮ ಹೆಬ್ಬಾರ್ ಅವರು ಬುಧವಾರ ಪಟ್ಟಣದ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ತಲಾ ರೂ. 2 ಲಕ್ಷ ರು ಪರಿಹಾರ ಧನದ ಚೆಕ್ ಅನ್ನು ವಿತರಿಸಿದರು.

==============





















