ಮುಂಬೈ ಪೊಲೀಸರ ಹೆಸರಿನಲ್ಲಿ ಕರೆ ಮಾಡಿದ ಅಪರಿಚಿತರು ಉಮ್ಮಚಗಿಯ ವ್ಯಕ್ತಿಯೊಬ್ಬರಿಂದ ತಮ್ಮ ಖಾತೆಗೆ ಕೋಟ್ಯಂತರ ರೂ ಹಣವನ್ನು ವರ್ಗಾಯಿಸಿಕೊಂಡು ಮೋಸ ಮಾಡಿದ ಘಟನೆ ನಡೆದಿದೆ.

ಎ.24ರಂದು ಯಲ್ಲಾಪುರ ತಾಲೂಕಿನ ಉಮ್ಮಚಗಿಯ ಕೃಷಿಕ ಹಾಗೂ ಎಲ್.ಐ.ಸಿ.ಏಜೆಂಟರಾದ ಶಿವಾನಂದ ತಿಮ್ಮಪ್ಪ ಹೆಗಡೆಯವರ ಮೊಬೈಲ್ ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯು ತಾನು ಮುಂಬೈ ಪೊಲೀಸ್ ಹೆಡ್ ಕ್ವಾಟ್ರಸ್ ನಿಂದ ಕರೆ ಮಾಡುತ್ತಿರುದಾಗಿ ಹೇಳಿದನು, ಯಾರೋ ಭಯೋತ್ಪಾದಕರು ಶಿವಾನಂದ ಹೆಗಡೆಯವರ ಹೆಸರಿನಲ್ಲಿರುವ ಆಧಾರ ಕಾರ್ಡನ್ನು ಬಳಸಿಕೊಂಡು, ಕೆನರಾ ಬ್ಯಾಂಕಿನಲ್ಲಿ ಖಾತೆ ತೆರೆದು ಕೋಟ್ಯಂತರ ರೂ ಅವ್ಯವಹಾರ ಮಾಡಿದ್ದಾರೆ. ಶಿವಾನಂದ ಹೆಗಡೆಯವರ ಈ ಖಾತೆಯಲ್ಲಿ ಮನಿ ಲ್ಯಾಂಡರಿಂಗ್ ನಡೆಸಿದ ಬಗ್ಗೆ ಮುಂಬೈ ಕ್ರೈಂ ಬ್ರ್ಯಾಂಚಿನಲ್ಲಿ ಎಫ್.ಐ.ಆರ್. ದಾಖಲಾಗಿದೆ ಎಂದು ತಿಳಿಸಿ,

ಶಿವಾನಂದ ಹೆಗಡೆಯವರ ಹೆಸರಿರುವ ಎಟಿಎಂ ಕಾರ್ಡ್ ಅನ್ನು ವಾಟ್ಸ್ ಅಪ್ ನಲ್ಲಿ ಕಳಿಸಿ, ಬಂಧಿಸುವುದಾಗಿ ಬೆದರಿಕೆ ಹಾಕಿದನು. ತಾನು ಯಾವುದೇ ತಪ್ಪು ಮಾಡಿಲ್ಲ, ಅವ್ಯವಹಾರ ಮಾಡಿಲ್ಲ ಎಂದು ಶಿವಾನಂದ ಹೆಗಡೆಯವರು ತಿಳಿಸಿದರೂ ಅಪರಿಚಿತ ವ್ಯಕ್ತಿಯು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ನಂತರ ಮುಂಬೈ ಪೊಲೀಸ್ ಅಧಿಕಾರಿಯ ಸಮವಸ್ತ್ರ ಧರಿಸಿದ ವ್ಯಕ್ತಿಯು ಶಿವಾನಂದ ಹೆಗಡೆಯವರಿಗೆ ವಿಡಿಯೋ ಕಾಲ್ ಮಾಡಿ, ತಾನು ಮುಂಬೈ ಪೊಲೀಸ್ ಐ.ಪಿ.ಎಸ್.ಅಧಿಕಾರಿ ಎಂದು ಪರಿಚಯಿಸಿಕೊಂಡು, ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದೇವೆ. ನಿಮ್ಮ ಖಾತೆಯಲ್ಲಿರುವ ಹಣವನ್ನು ರಿಸರ್ವ ಬ್ಯಾಂಕಿಗೆ ಜಮಾ ಮಾಡಬೇಕಾಗುತ್ತದೆ.

ಅವ್ಯವಹಾರ ಆಗಿಲ್ಲ ಎಂದಾದರೆ ಹಣವನ್ನು ವಾಪಸ್ ನಿಮ್ಮ ಖಾತೆಗೆ ಹಾಕುತ್ತೇವೆ, ಈ ವಿಷಯವನ್ನು ಯಾರಿಗೂ ಹೇಳಬಾರದು, ಹೇಳಿದರೆ ಅರೆಸ್ಟ್ ಮಾಡುತ್ತೇವೆ ಎಂದು ಬೆದರಿಸಿದನು. ನಂತರ ಮುಂಬೈ ಪೊಲೀಸ್ ಸಮವಸ್ತ್ರ ಧರಿಸಿದ್ದ ಇನ್ನೊಬ್ಬ ವ್ಯಕ್ತಿಯು ವಿಡಿಯೋ ಕಾಲ್ ಮಾಡಿ, ತಾನು ಡಿಐಜಿ ದರ್ಜೆಯ ಅಧಿಕಾರಿ ಎಂದು ಪರಿಚಯಿಸಿಕೊಂಡು, ಈ ಪ್ರಕರಣವನ್ನು ತಾನು ತನಿಖೆ ನಡೆಸುತ್ತಿದ್ದು, ಕೂಡಲೇ ಹಣವನ್ನು ವರ್ಗಾವಣೆ ಮಾಡುವಂತೆ ತಿಳಿಸಿದನು.

ಹಣ ವರ್ಗಾವಣೆ ಮಾಡಲು ಸಮಯಾವಕಾಶ ಬೇಕಾಗುತ್ತದೆ ಎಂದು ಶಿವಾನಂದ ಹೆಗಡೆ ತಿಳಿಸಿದಾಗ, ಹಣ ವರ್ಗಾವಣೆ ಮಾಡುವವರೆಗೆ ಪ್ರತಿದಿನ ನಿಮ್ಮ ಲೊಕೇಶನ್ ಹಾಗೂ ಫೋಟೋವನ್ನು ತಮ್ಮ ಮೊಬೈಲ್ ಗೆ ಕಳಿಸಬೇಕು ಎಂದು ತಿಳಿಸಿದನು. ಅಪರಿಚಿತ ವ್ಯಕ್ತಿಗಳ ಮಾತನ್ನು ನಿಜವೆಂದು ನಂಬಿದ ಶಿವಾನಂದ ಹೆಗಡೆಯವರು, ಏ.21ರಿಂದ ಏ.24ರ ವರೆಗೆ ಒಟ್ಟೂ 1,74,50,000 ರೂ ಹಣವನ್ನು ಅಪರಿಚಿತರ ಖಾತೆಗೆ ಜಮಾ ಮಾಡಿ ಮೋಸಹೋಗಿದ್ದಾರೆ. ಈ ಬಗ್ಗೆ ಶಿವಾನಂದ ಹೆಗಡೆಯವರು ಕಾರವಾರದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಪರಿಚಿತರ ವಿರುದ್ಧ ದೂರು ದಾಖಲಿಸಿದ್ದಾರೆ.

==============================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading