ಮೇ.12ರಂದು ಎಲ್.ಎಸ್.ಎಂ.ಪಿ.ಸೊಸೈಟಿ ವಜ್ರಮಹೋತ್ಸವ, ನೂತನ ಕಟ್ಟಡ ಉದ್ಘಾಟನೆ
ಯಲ್ಲಾಪುರ ಪಟ್ಟಣದ ಯಲ್ಲಾಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ (ಎಲ್.ಎಸ್.ಎಂ.ಪಿ) ವಜ್ರಮಹೋತ್ಸವ ಹಾಗೂ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ಮೇ.12 ಮಂಗಳವಾರ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ನಾಗರಾಜ ಕವಡಿಕೇರಿ ಹೇಳಿದರು.
ಶನಿವಾರ ಅವರು ಸಂಘದ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಮಾರಂಭದ ವಿವರ ನೀಡಿದರು. ಸಂಘದ ಭದ್ರತಾ ಕೋಠಡಿಯನ್ನು ಸ್ವರ್ಣವಲ್ಲೀ ಮಠದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ಉದ್ಘಾಟಿಸುವರು.
ಸಂಘದ ನೂತನ ಕಟ್ಟಡವನ್ನು ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟಿಸುವರು, ಸಭಾಭವನವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸುವರು, ಮೀಟಿಂಗ್ ಹಾಲ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಉದ್ಘಾಟಿಸುವರು ಎಂದರು. ಮಂಗಳವಾರ ಬೆಳಿಗ್ಗೆ 10.30ಕ್ಕೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಸಚಿವ ಮಂಕಾಳ ವೈದ್ಯ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಶಿವರಾಮ ಹೆಬ್ಬಾರ್, ವಿ.ಪ.ಸದಸ್ಯ ಶಾಂತಾರಾಮ ಸಿದ್ದಿ ಭಾಗವಹಿಸುವರು,
ಸಂಘದ ಅಧ್ಯಕ್ಷ ನಾಗರಾಜ ಕವಡಿಕೇರಿ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಟಿ.ಎಸ್.ಎಸ್.ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಆನಗೋಡ ಸೊಸೈಟಿ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಧಾತ್ರಿ ಫೌಂಡೇಶನ್ ಅಧ್ಯಕ್ಷ ಶ್ರೀನಿವಾಸ ಭಟ್ಟ,ತಹಶೀಲ್ದಾರ ಚಂದ್ರಶೇಖರ ಹೊಸಮನಿ, ಸಹಕಾರಿ ಸಂಘಗಳ ಉಪನಿಬಂಧಕಿ ತೇಜಸ್ವಿನಿ, ಕೆ.ಡಿ.ಸಿ.ಸಿ.ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಭಟ್ಟ, ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಅಜಿತ್ ಶಿರಹಟ್ಟಿ ಮುಂತಾದವರು ಭಾಗವಹಿಸುವರು ಎಂದು ನಾಗರಾಜ ಕವಡಿಕೇರಿ ವಿವರ ನೀಡಿದರು.
ಮಂಗಳವಾರ ಮಧ್ಯಾಹ್ನ ಗೌರವ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಸಂಘದ ಹಿಂದಿನ ಎಲ್ಲ ಅಧ್ಯಕ್ಷರನ್ನು ಹಾಗೂ ಉಪಾಧ್ಯಕ್ಷರನ್ನು ಮತ್ತು ಮುಖ್ಯಕಾರ್ಯನಿರ್ವಾಹಕರನ್ನು ಸನ್ಮಾನಿಸಲಾಗುವುದು. ಸಮಾರೋಪ ಸಮಾರಂಭ
ಮಂಗಳವಾರ ಸಂಜೆ 5.30ಕ್ಕೆ ಸ್ವರ್ಣವಲ್ಲೀ ಮಠದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ಸಾನ್ನಿಧ್ಯದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಸಂಘದ ಅಧ್ಯಕ್ಷ ನಾಗರಾಜ ಕವಡಿಕೇರಿ ಅಧ್ಯಕ್ಷತೆ ವಹಿಸುವರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಗಣ್ಯರು ಉಪಸ್ಥಿತರಿರುವರು.
ಯಕ್ಷಗಾನ ಪ್ರದರ್ಶನ
ಮಂಗಳವಾರ ರಾತ್ರಿ 8.30ಕ್ಕೆ ಪೆರ್ಡೂರು ಮೇಳದ ಕಲಾವಿದರು ಹಾಗೂ ಅತಿಥಿ ಕಲಾವಿದರಿಂದ ಚಂದ್ರಹಾಸ ಚರಿತ್ರೆ ಹಾಗೂ ಮಾಯಾ ಮೃಗಾವತಿ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಈ ಸಮಾರಂಭಕ್ಕೆ ಎಲ್ಲರೂ ಆಗಮಿಸಬೇಕು ಎಂದು ನಾಗರಾಜ ಕವಡಿಕೆರೆ ಕೋರಿದರು.
ನಮ್ಮ ಸಂಘಕ್ಕೆ ಸದಸ್ಯರೇ ಜೀವಾಳವಾಗಿದ್ದು, ಎಲ್ಲರ ಸಹಕಾರದಿಂದ ಸಂಘವು ಪ್ರಗತಿಯಲ್ಲಿದೆ, ಸಂಘದ ವಜ್ರಮಹೋತ್ಸವ ಹಾಗೂ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ಸಂಘದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಸಂಘದ ಪ್ರಗತಿಗೆ ಸಹಕರಿಸಿದ ಎಲ್ಲರನ್ನೂ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ: ನಾಗರಾಜ ಕವಡಿಕೇರಿ. ಅಧ್ಯಕ್ಷರು. ಎಲ್.ಎಸ್.ಎಂ.ಪಿ.ಸೊಸೈಟಿ ಯಲ್ಲಾಪುರ