ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಅಜೀವಿಕ ಅಭಿಯಾನ (ಗ್ರಾಮೀಣ) (ವಿಬಿ-ಜಿ ರಾಮ್-ಜಿ) ಯೋಜನೆಯು ದೇಶದಾದ್ಯಂತ ಜುಲೈ 1 ರಿಂದ ಜಾರಿಗೆ ಬರಲಿದ್ದು, ಅದರಂತೆ ಆಯುಕ್ತಾಲಯ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದಲೂ ಅಗತ್ಯ ತರಬೇತಿ ನೀಡಲಾಗುತ್ತಿದೆ. ತಳಮಟ್ಟದಲ್ಲಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಪೂರ್ವಸಿದ್ಧತೆ ಅವಶ್ಯಕ ಎಂದು ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ದನವಾಡಕರ ಹೇಳಿದರು.

ಅವರು ಗುರುವಾರ ಯಲ್ಲಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಯಲ್ಲಾಪುರ, ಹಳಿಯಾಳ ಮತ್ತು ದಾಂಡೇಲಿ ತಾಲೂಕಿನ ಅಧಿಕಾರಿ ಸಿಬ್ಬಂದಿಗಳಿಗಾಗಿ ನಡೆದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಈಗಾಗಲೇ ತಿಳಿದಿರುವಂತೆ ಹೊಸ ಯೋಜನೆಯಡಿ ಕ್ರಿಯಾ ಯೋಜನೆ ತಯಾರಿ, ಕೂಲಿ ಬೇಡಿಕೆ ಮತ್ತು ಹಂಚಿಕೆ, ಕೂಲಿಕಾರರ ಹಾಜರಾತಿ, ವೇತನ ಪಾವತಿ ಸೇರಿದಂತೆ ಸಾಕಷ್ಟು ವಿಷಯಗಳಲ್ಲಿ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ. ಯೋಜನೆ ರೂಪುರೇಷಗಳಲ್ಲಿಯು ಬದಲಾವಣೆಗಳು ಆಗಿವೆ. ಹೀಗಾಗಿ ಅಧಿಕಾರಿ ಸಿಬ್ಬಂದಿಗಳ ತಿಳುವಳಿಕೆಗಾಗಿ ನಡೆಸುತ್ತಿರುವ ಇಂತಹ ತರಬೇತಿ ಕಾರ್ಯಾಗಾರಗಳ ಸದುಪಯೋಗ ಪಡೆದುಕೊಂಡು, ಮುಂದಿನ ದಿನಗಳಲ್ಲಿ ಯೋಜನೆಯನ್ನು ಉತ್ತಮ ರೀತಿಯಲ್ಲಿ ಅನುಷ್ಠಾನ ಮಾಡುವ ಮೂಲಕ ಜವಾಬ್ದಾರಿ ನಿಭಾಯಿಸಿ ಎಂದು ಹೇಳಿದರು.

ಮಾಸ್ಟರ್ ಟ್ರೇನರ್ ಗಳಾದ ಕಿರಣಕುಮಾರ ಎಂ.ಜಿ., ಕುಮಾರ್ ವಾಸನ್ ಮತ್ತು ಗೌರೀಶ್ ಹೆಗಡೆ ಹಾಗೂ ಜಿಲ್ಲಾ ಎಮ್.ಆಯ್.ಎಸ್. ಸಂಯೋಜಕ ಶಿವಾಜಿ ಬೊಬ್ಲಿ ತರಬೇತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಯಲ್ಲಾಪುರ, ಹಳಿಯಾಳ ಮತ್ತು ದಾಂಡೇಲಿ ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕರು (ಗ್ರಾಉ), ಅನುಷ್ಠಾನ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಮನರೇಗಾ ತಾಂತ್ರಿಕ ಸಿಬ್ಬಂದಿ, ಟಿಎಮ್‍ಆಯ್‍ಎಸ್, ಐಇಸಿ ಸಂಯೋಜಕರು ಹಾಗೂ ಡಿಇಒ ಉಪಸ್ಥಿತರಿದ್ದರು.

=====================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading