




ಬಾಲಕೃಷ್ಣ ನಾಯಕ ಅವರ ಸಮಾಜಮುಖಿ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ

ಯಲ್ಲಾಪುರ ತಾಲೂಕಿನ ಕರಡೊಳ್ಳಿಯಲ್ಲಿ ಗ್ರಾಮಸ್ಥರ ಕೋರಿಕೆಯಂತೆ ಉದ್ಯಮಿ ಬಾಲಕೃಷ್ಣ ನಾಯಕ ಅವರು ಈ ಗ್ರಾಮದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಕೊಳವೆ ಬಾವಿ ಕೊರೆಸಿಕೊಡುವ ಮೂಲಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಕೊಟ್ಟಿದ್ಧಾರೆ. ಬಾಲಕೃಷ್ಣ ನಾಯಕ ಅವರ ಈ ಜನ ಸೇವಾ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಕೆಲ ದಿನಗಳ ಹಿಂದೆ ಉದ್ಯಮಿ ಬಾಲಕೃಷ್ಣ ನಾಯಕ ಅವರನ್ನು ಭೇಟಿಯಾದ ಕರಡೊಳ್ಳಿ ಗ್ರಾಮಸ್ಥರು, ತಮ್ಮ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ಇದೆ, ಗ್ರಾಮದಲ್ಲಿ ಹಿಂದುಳಿದ ಗೌಳಿ ಸಮುದಾಯದ ಜನರು ವಾಸಿಸುತ್ತಿದ್ದು, ಇಲ್ಲಿನವರ ನೀರಿನ ಬವಣೆ ನೀಗಿಸಿಕೊಡುವಂತೆ ಮನವಿ ಮಾಡಿದ್ದರು.
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಬಾಲಕೃಷ್ಣ ನಾಯಕ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಕೊಳವೆ ಬಾವಿ ನಿರ್ಮಿಸಿಕೊಟ್ಟಿದ್ದಾರೆ.

ಒಂದು ಬೋರ್ ಫೇಲ್…ಎರಡನೇ ಪ್ರಯತ್ನ ಯಶಸ್ವಿ
ಕರಡೊಳ್ಳಿಯಲ್ಲಿ ಮೊದಲು ಕೊರೆದ ಕೊಳವೆ ಬಾವಿಯಲ್ಲಿ ನೀರು ಬರಲಿಲ್ಲ, 200 ಫೂಟ್ ಕೊರೆದರೂ ನೀರು ಕಾಣದೇ ವಿಫಲವಾಯಿತು. ಆದರೂ ಗ್ರಾಮಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಲೇಬೇಕು ಎಂಬ ಛಲದಿಂದ ಬಾಲಕೃಷ್ಣ ನಾಯಕ ಅವರು ಮತ್ತೊಂದು ಕೊಳವೆ ಬಾವಿ ಕೊರೆಸಿದರು. ಈ ಕೊಳವೆ ಬಾವಿಯಲ್ಲಿ ನೀರು ಉಕ್ಕಿಬಂದಿದ್ದು, 3.5 ಇಂಚು ನೀರು ದೊರೆತ ಈ ಕ್ಷಣವನ್ನು ಗ್ರಾಮಸ್ಥರು ಖುಷಿಯಿಂದ ಸಂಭ್ರಮಿಸಿದರು.

ಗ್ರಾಮಸ್ಥರ ಸಂತಸ
ತಮ್ಮ ಗ್ರಾಮದ ಬಹು ದಿನಗಳ ಬೇಡಿಕೆಯನ್ನು ಈಡೇರಿಸಿದ ಬಾಲಕೃಷ್ಣ ನಾಯಕ ಅವರ ಜನಸೇವಾ ಕಾರ್ಯವನ್ನು ಗ್ರಾಮಸ್ಥರು ಸಂತಸದಿಂದ ಕೊಂಡಾಡಿದ್ದಾರೆ, ನೀರಿನ ಸೌಲಭ್ಯ ಒದಗಿಸಿದ ಬಾಲಕೃಷ್ಣ ನಾಯಕ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.
ಗ್ರಾಮಸ್ಥರೊಂದಿಗೆ ಬಾಲಕೃಷ್ಣ ನಾಯಕ ಮಾತನಾಡಿ, ಇಂತಹ ಸೇವಾಕಾರ್ಯಕ್ಕೆ ನನಗೆ ಅವಕಾಶ ದೊರೆತಿರುವುದು ನನಗೆ ಸಮಾಧಾನ ತಂದಿದೆ, ನಿಮ್ಮೆಲ್ಲರ ಸೇವೆಯಲ್ಲಿ ನಾನೂ ಸಂತೋಷಗೊಂಡಿದ್ದೇನೆ, ನನ್ನ ಇಂತಹ ಸಮಾಜಮುಖಿ, ಜನಕಲ್ಯಾಣ ಕೆಲಸಗಳು ನಿರಂತರವಾಗಿ ಮುಂದುವರಿಯುತ್ತದೆ. ಇಂತಹ ಸಾರ್ಥಕವಾದ ಕೆಲಸದಿಂದ ನನಗೆ ಖುಷಿಯಾಗಿದೆ. ನಿಮ್ಮೆಲ್ಲರ ಸಹಕಾರ, ಆಶೀರ್ವಾದ ಇರಲಿ ಎಂದು ವಿನಮ್ರವಾಗಿ ನುಡಿದರು.

ಯಲ್ಲಾಪುರ ತಾಲೂಕಿನ ಕರಡೊಳ್ಳಿ ಗ್ರಾಮದ ಹಿಂದುಳಿದ ಗೌಳಿ ಸಮಾಜದ ಬಡ ಕುಟುಂಬಗಳ ಕುಡಿಯುವ ನೀರಿನ ಸಮಸ್ಯೆಗೆ ಸಾಮಾಜಿಕ ಕಾರ್ಯಕರ್ತರಾದ ಬಾಲು ನಾಯಕ ಅವರು ಸ್ಪಂದಿಸಿದ್ದಾರೆ. ತಮಗೆ ಸಾರ್ವಜನಿಕರು ನೀಡಿದ ಮನವಿಯನ್ನು ತಕ್ಷಣವೇ ಮನಗಂಡು ಅವರು, ಕೊಳವೆ ಬಾವಿ ಕೊರೆಸುವಾಗ ಎದುರಾದ ಹಿನ್ನಡೆಯನ್ನೂ ಲೆಕ್ಕಿಸದೆ ಗ್ರಾಮಸ್ಥರ ನೀರಿನ ದಾಹ ನೀಗಿಸುವ ಮೂಲಕ ತಮ್ಮ ಕೊಡುಗೈ ದಾನಗುಣವನ್ನು ಮೆರೆದಿದ್ದಾರೆ.

ಕಳೆದ ವಾರ ಗ್ರಾಮಸ್ಥರು ಬಾಲು ನಾಯಕ ಅವರಿಗೆ ಲಿಖಿತ ಮನವಿ ಸಲ್ಲಿಸಿ ತಮ್ಮ ನೀರಿನ ಸಂಕಷ್ಟವನ್ನು ತೋಡಿಕೊಂಡಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಬಾಲು ಅವರು ಗ್ರಾಮದಲ್ಲಿ ಕೊಳವೆ ಬಾವಿ ಕೊರೆಸುವ ವ್ಯವಸ್ಥೆ ಮಾಡಿದ್ದರು. ಆದರೆ ದುರಾದೃಷ್ಟವಶಾತ್ ಮೊದಲ ಕೊಳವೆ ಬಾವಿಯಲ್ಲಿ ನೀರು ತಾಗಲಿಲ್ಲ. ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಕೈಚೆಲ್ಲುವವರೇ ಹೆಚ್ಚು. ಆದರೆ ಬಾಲು ಅವರಿಗೆ ಇಡೀ ಊರಿನ ಬಡವರ ಕಷ್ಟ ನಿವಾರಿಸುವುದೇ ಮುಖ್ಯ ಉದ್ದೇಶವಾಗಿತ್ತು. ಹೀಗಾಗಿ ಕಿಂಚಿತ್ತೂ ಧೃತಿಗೆಡದ ಅವರು, ತಕ್ಷಣವೇ ಸ್ವಂತ ಜವಾಬ್ದಾರಿಯಲ್ಲಿ ಇನ್ನೊಂದು ಕೊಳವೆ ಬಾವಿಯನ್ನು ಕೊರೆಸಿಕೊಡುವ ಮೂಲಕ ಯಶಸ್ವಿಯಾಗಿ ನೀರು ತರಿಸಿ ಗ್ರಾಮಸ್ಥರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ.
ಗ್ರಾಮಸ್ಥರಿಂದ ಹೃದಯಪೂರ್ವಕ ಧನ್ಯವಾದ:
ತಮ್ಮ ಸ್ವಾರ್ಥವಿಲ್ಲದ ಜನಸೇವೆಯನ್ನು ಕಣ್ಣಾರೆ ಕಂಡ ಗ್ರಾಮದ ಯುವಕ ಹಾಗೂ KARDGYS ಖಜಾಂಚಿ ಲಕ್ಷ್ಮಣ ಕೋಕರೆ, ಮದನೂರು ಗ್ರಾ.ಪಂ. ಮಾಜಿ ಅಧ್ಯಕ್ಷ ವಿಟ್ಟು ಶೇಳಕೆ, ಪ್ರಮುಖರಾದ ಶ್ಯಾಮ್ ಸಿಂಧೆ ಹಾಗೂ ಗ್ರಾಮದ ಹಿರಿಯರು ಮತ್ತು ಸಮಸ್ತ ಗ್ರಾಮಸ್ಥರು ಹಾಗೂ ಸ್ಥಳೀಯ ಮುಖಂಡರು ಬಾಲು ಅಣ್ಣಾ ಅವರ ಈ ಅದ್ಭುತ ಕಾರ್ಯಕ್ಕೆ ಭಾವುಕರಾಗಿ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಯಶಸ್ವಿಯಾಗಿ ಕೊಳವೆ ಬಾವಿ ಕೊರೆದು ನೀರು ಬಂದ ಈ ಸಂದರ್ಭದಲ್ಲಿ ಬಾಲು ನಾಯಕ ಅವರೊಂದಿಗೆ ಮುಖಂಡರಾದ ಲಕ್ಷ್ಮಣ ಕೋಕರೆ, ವಿಟ್ಟು ಶೇಳಕೆ, ಶ್ಯಾಮ್ ಸಿಂಧೆ, ಮಹೇಶ್ ದೇಸಾಯಿ, ಚಂದು ಮಾಡಾಕರ್, ವಿಜಯಕುಮಾರ್ ಹಾಗೂ ಊರಿನ ಹಿರಿಯರು ಮತ್ತು ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದು ಹರ್ಷ ವ್ಯಕ್ತಪಡಿಸಿದರು.

======================






















