ಭಗವದ್ಗೀತೆಯ ಮೂಲಕ ಸಮಾಜ ಕಟ್ಟುವ ಕೆಲಸವಾಗಲಿ: ಸ್ವರ್ಣವಲ್ಲೀ ಶ್ರೀ
ಭಗವದ್ಗೀತೆಯ ಮೂಲಕ ಸಮಾಜವನ್ನು ಕಟ್ಟುವ ಕೆಲಸವಾಗಲಿ, ಭಗವದ್ಗೀತೆಯ ಜ್ಞಾನ ನಮ್ಮ ಅಂಧಃಕಾರವನ್ನು ಹೋಗಲಾಡಿಸಲಿ ಎಂದು ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ನುಡಿದರು.
ಅವರು ಗುರುವಾರ ಸಂಜೆ ಯಲ್ಲಾಪುರ ತಾಲೂಕಿನ ಕರಡೊಳ್ಳಿಯ ಗೋವರ್ಧನ ಗೋಶಾಲೆಗೆ ಭೇಟಿನೀಡಿ, ಸಭೆಯಲ್ಲಿ ಆಶೀರ್ವಚನ ನೀಡಿದರು. ಎಲ್ಲ ಕಡೆಯಿಂದಲೂ ಬೆಳಕು ಬಂದರೆ ಕತ್ತಲೆ ನಾಶವಾಗುವಂತೆ, ಭಗವದ್ಗೀತೆಯ ಆರಾಧನೆಯು ಎಲ್ಲೆಡೆ ನಡೆದರೆ ಅಜ್ಞಾನವೆಂಬ ಕತ್ತಲೆ ನಾಶವಾಗುತ್ತದೆ.
ಇಂದಿನ ದಿನಗಳಲ್ಲಿ ಎಲ್ಲೆಡೆ ಭಗವದ್ಗೀತೆಯ ಜಾಗೃತಿ ಆಗಬೇಕಾದ ಅಗತ್ಯ ಇದೆ. ಭಗವದ್ಗೀತೆಯು ಪ್ರತಿಯೊಬ್ಬ ಹಿಂದೂ ವ್ಯಕ್ತಿಯ ಮನೆಗೂ ತಲುಪಬೇಕು, ಎಲ್ಲರಲ್ಲಿಯೂ ಭಗವದ್ಗೀತೆಯ ಅರಿವು ಮೂಡಬೇಕು ಎಂದರು. ಪ್ರಸ್ತುತ ಕರಡೊಳ್ಳಿ ಗೋಶಾಲೆಯು ಸಾರ್ವಜನಿಕರ ಸಹಕಾರದಿಂದ ಉತ್ತಮವಾಗಿ ನಡೆಯುತ್ತಿದೆ. ಭಗವದ್ಗೀತೆಯ ಎಲ್ಲ ಭಕ್ತರು ಗೋವಿನ ಭಕ್ತರೂ ಆಗಲಿ ಎಂದು ಆಶಿಸಿದರು.
ಶ್ರೀಗಳು ಗೋಶಾಲೆಯ ನೂತನ ಕಟ್ಟಡವನ್ನು ವೀಕ್ಷಿಸಿದರು.
ಶ್ರೀಗಳು ಗೋವುಗಳಿಗೆ ಗೋಗ್ರಾಸ ನೀಡಿದರು.
ಗೋಶಾಲೆಯ ನಿರ್ವಹಣಾ ಸಮೀತಿಯ ಪ್ರಮುಖರು ಫಲಸಮರ್ಪಣೆ ಮಾಡಿದರು. ಗಣಪತಿ ಭಟ್ಟ ಕೊಲಿಬೇಣ ನಿರ್ವಹಿಸಿದರು. ಡಾ.ಶಂಕರ ಭಟ್ಟ ಬಾಲಿಗದ್ದೆ, ಪ್ರಮೋದ ಹೆಗಡೆ ಸಂಕಲ್ಪ ಮುಂತಾದವರು ಇದ್ದರು.
ಗೀತಾ ಜ್ಞಾನ ಯಜ್ಞದ ಮಾತೆಯರು ಭಗವದ್ಗೀತಾ ಪಠಣ ಮಾಡಿದರು.
ಗೀತಾ ಜ್ಞಾನ ಯಜ್ಞ ಸಮೀತಿಯಿಂದ ನಿಧಿ ಸಮರ್ಪಣೆ
ಗೀತಾ ಜ್ಞಾನ ಯಜ್ಞ ಸಮೀತಿಯ ವತಿಯಿಂದ ಕರಡೊಳ್ಳಿಯ ಗೋಶಾಲೆಗೆ ಶ್ರೀಗಳ ಸಮ್ಮುಖದಲ್ಲಿ ನಿಧಿ ಸಮರ್ಪಣೆ ನಡೆಯಿತು.
ಗೀತಾ ಜ್ಞಾನ ಯಜ್ಞದ ಪ್ರಧಾನ ಗುರುಗಳಾದ ಸುಬ್ರಾಯ ನಂದೋಡಿಯವರು 50 ಸಾವಿರ ರೂ ಚೆಕ್ ಅನ್ನು ಗೋಶಾಲೆಯ ಪ್ರತಿನಿಧಿಗಳಿಗೆ ಹಸ್ತಾಂತರಿಸಿದರು. ಕಳೆದ ಮೇ.17 ರಂದು ಯಲ್ಲಾಪುರದಲ್ಲಿ ನಡೆದ ಗೀತಾ ಜ್ಞಾನ ಯಜ್ಞದ ಸ್ನೇಹ ಸಮ್ಮೇಳನದಲ್ಲಿ ಉಳಿಕೆಯಾದ ಹಣದಲ್ಲಿ 50 ಸಾವಿರ ರೂ ಹಣವನ್ನು ಗೋಶಾಲೆಗೆ ಸಮರ್ಪಿಸಲಾಯಿತು.
ಸ್ವರ್ಣವಲ್ಲೀ ಶ್ರೀಗಳ ಗೀತಾ ಅಭಿಯಾನವೇ ಪ್ರೇರಣೆ
ನಿಧಿ ಸಮರ್ಪಣೆ ಮಾಡಿದ ಸುಬ್ರಾಯ ನಂದೋಡಿ ಮಾತನಾಡಿ, ಗೀತಾ ಜ್ಞಾನ ಯಜ್ಞದ ಮೂಲಕ ಭಗವದ್ಗೀತೆಯನ್ನು ಪ್ರಸರಣ ಮಾಡಲು ನಮಗೆ ಸ್ವರ್ಣವಲ್ಲೀ ಶ್ರೀಗಳ ಭಗವದ್ಗೀತಾ ಅಭಿಯಾನವೇ ಪ್ರೇರಣೆಯಾಗಿದೆ. ಭಗವದ್ಗೀತೆಯ ಆರಾಧನೆಯಲ್ಲಿ ಮಾತೆಯರು ಪಾಲ್ಗೊಂಡಂತೇ ಪುರುಷರೂ ಸಹ ಪಾಲ್ಗೊಳ್ಳುವಂತಾಗಬೇಕು ಎಂದರು.