ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯು ಡಿ.7 ರಂದು ನಡೆಯಲಿದ್ದು, ಸದರಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಯಬೇಕಾಗಿರುವುದರಿಂದ, ಶಿಕ್ಷಕರ ಅಹರ್ತಾ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ಯಾವುದೇ ತರಹದ ಅವ್ಯವಹಾರ ಕಾನೂನು ಬಾಹಿರ ಚಟುವಟಿಕೆಗಳು ಅಥವಾ ಶಾಂತತಾಭಂಗ ಆಗದಂತೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಸಭೆ ಸಮಾರಂಭಗಳನ್ನು ನಡೆಯುತ್ತಿದ್ದಲ್ಲಿ ಧ್ವನಿವರ್ಧಕಗಳನ್ನು ತಡೆಯುವ ನಿಟ್ಟಿನಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಪರೀಕ್ಷಾ ಸಮಯದಿಂದ ಪರೀಕ್ಷಾ ಅವಧಿ ಮುಗಿಯುವವರೆಗೆ ಭಾರತೀಯ ಸುರಕ್ಷಾ ಸಂಹಿತೆ ಕಾಯ್ದೆ 2023 ಕಲಂ 163 ರನ್ವಯ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ನಿಷೇಧಾಜ್ಞೆಯನ್ನು ಹೊರಡಿಸಿರುತ್ತಾರೆ.
ಸದರಿ ಅವಧಿಯಲ್ಲಿ ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿರುವ ಝೆರಾಕ್ಸ್ ಅಂಗಡಿ ಹಾಗೂ ಸೈಬರ್ ಕೆಫೆಗಳನ್ನು ಮುಚ್ಚುವಂತೆ ಮತ್ತು ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳು ಇಲೆಕ್ಟ್ರಾನಿಕ್ಸ್ ವಸ್ತುಗಳು ಅಂದರೆ, ಮೊಬೈಲ್ ಫೋನ್ಗಳು, ಸ್ಮಾರ್ಟ ವಾಚ್, ವೈರ್ ಲೆಸ್/ ಬ್ಲೂಟೂತ್, ಇಯರ್ ಹೆಡ್ ಫೋನ್ ಗಳನ್ನು ತರಲು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವರ ಜಿಲ್ಲಾ ಪ್ರವಾಸ
ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ ಸೋಮಣ್ಣ ಅವರು ಡಿ.6 ರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು, ಅಂದು ಸಂಜೆ 4 ಗಂಟೆಗೆ ಕಾರವಾರ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ಸಚಿವರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ಡಿ.10ರಂದು ವಿವಿದೆಡೆ ವಿದ್ಯುತ್ ವ್ಯತ್ಯಯ
ಡಿ. 10 ಬುಧವಾರದಂದು ಯಲ್ಲಾಪುರ ತಾಲೂಕಿನ ಉಮ್ಮಚಗಿಯ ಉಪ ಕೇಂದ್ರದಲ್ಲಿ ಪರಿವರ್ತಕ ನಿರ್ವಹಣಾ ಕಾಮಗಾರಿ ಇರುವುದರಿಂದ ಹಿತ್ಲಳ್ಳಿ, ಬಿಳ್ಕಿ, ಮಾವಿನಕಟ್ಟಾ, ಉಮ್ಮಚಗಿ ಭಾಗದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಲಾರಿ ಪಲ್ಟಿ: ಚಾಲಕನಿಗೆ ಗಾಯ
ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಹೆದ್ದಾರಿ ಅಂಚಿನಲ್ಲಿ ಪಲ್ಟಿಯಾಗಿ ಲಾರಿ ಚಾಲಕನಿಗೆ ಗಾಯವಾದ ಘಟನೆ ಯಲ್ಲಾಪುರ ತಾಲೂಕಿನ ಅರಬೈಲಿನಲ್ಲಿ ನಡೆದಿದೆ. ಕಲಘಟಗಿಯ ಗಂಗಾಧರ ಬಂಡಿವಡ್ಡರ್ ಎಂಬಾತ ಕೋರಿಯರ್ ವಸ್ತುಗಳನ್ನು ತುಂಬಿದ್ದ ಲಾರಿಯನ್ನು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಚಲಾಯಿಸಿಕೊಂಡು ಬರುತ್ತಿರುವಾಗ, ಚಾಲಕನ ನಿಯಂತ್ರಣ ತಪ್ಪಿದ ಲಾರಿ ಪಲ್ಟಿಯಾಗಿ ಚಾಲಕನ ಹಣೆಗೆ ಗಾಯವಾಗಿದೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.