
ಯುವಜನತೆಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು

ಯಲ್ಲಾಪುರ ಪಟ್ಟಣದ ಕಾಳಮ್ಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ವಾಣಿಜ್ಯಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರ ಈ ಶಿಕ್ಷಣ ಸಂಸ್ಥೆಯು 1985 ರಲ್ಲಿ ಸ್ಥಾಪಿತವಾಗಿದ್ದು ತಾಲೂಕಿನ ಯುವಜನತೆಯ ಸರ್ವತೋಮುಖ ಬೆಳವಣಿಗೆಗೆ ಅವಶ್ಯವಿರುವ ಗುಣಮಟ್ಟದ ಶಿಕ್ಷಣ, ಜೀವನ ಕೌಶಲ್ಯ ಹಾಗೂ ಉದ್ಯೋಗ ಕೌಶಲ್ಯ ತರಬೇತಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಾ ಬರುತ್ತಿದೆ.
ಉತ್ಕೃಷ್ಟ, ಕೌಶಲ್ಯಪೂರ್ಣ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿದೆ ಯಲ್ಲಾಪುರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಈ ಕಾಲೇಜಿನಲ್ಲಿ ಕಲಿಕೆಗೆ ಪೂರಕವಾದ ಮೂಲ ಸೌಕರ್ಯಗಳು, ದಕ್ಷ ಪ್ರಾಂಶುಪಾಲರು, ನುರಿತ ಉಪನ್ಯಾಸಕರು, ವಿಶೇಷವಾಗಿ ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆ ಮಾಡಿ ಗುರಿ ತಲುಪಲು ಅಗತ್ಯವಾದ ಹಲವು ಅವಕಾಶಗಳು ಇವೆ.

ಸಮಾಜಕ್ಕೆ ಈ ಸಂಸ್ಥೆಯು ಯಶಸ್ವಿ ಉದ್ಯಮಿಗಳು, ಲೆಕ್ಕ ಪರಿಶೋಧಕರು, ರಾಜ್ಯಮಟ್ಟದ ಕಲಾ ಪ್ರತಿಭೆ ಮತ್ತು ಕ್ರೀಡಾಪಟುಗಳು, ಶಿಕ್ಷಕರು, ಅಧಿಕಾರಿಗಳು, ಸಮಾಜ ಸೇವಕರು, ವಕೀಲರು, ಪತ್ರಿಕೋದ್ಯಮಿಗಳನ್ನು ಕೊಡುಗೆಯಾಗಿ ನೀಡಿದ ಹೆಮ್ಮೆಗೆ ಪಾತ್ರವಾಗಿದೆ. ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಕೇವಲ ಪಠ್ಯಕ್ಕೆ ಸೀಮಿತರಾಗದೇ ಕೌಶಲ್ಯಾಧಾರಿತ ಹಾಗೂ ವೃತ್ತಿಪರ ಕೋರ್ಸ್ ಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಮತ್ತು ಹೊಸದಾಗಿ ಬಿ.ಸಿ.ಎ ಕೋರ್ಸು ಪ್ರಾರಂಭವಾಗುತ್ತಿದ್ದು, ಮೆಂಟರಿಂಗ್ ವ್ಯವಸ್ಥೆ, ವಿದ್ಯಾರ್ಥಿಗಳಿಗಾಗಿ ಆರೋಗ್ಯ ಕೇಂದ್ರ, ಉದ್ಯೋಗ ಮೇಳ ಆಯೋಜನೆ ಹಾಗೂ ವಿವಿಧ ಚಟುಚಟಿಕೆಗಳ ಮೂಲಕ ವಿದ್ಯಾರ್ಥಿಗಳ ಭವಿಷ್ಯ ಹಾಗೂ ವ್ಯಕ್ತಿತ್ವ ರೂಪಿಸುವ ಕಾರ್ಯಕ್ಕೆ ಮುಂದಾಗಿರುವುದು ವಿಶೇಷವಾಗಿದೆ.

ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕರಾದ ಶಿವರಾಮ ಹೆಬ್ಬಾರ ಅವರ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಹಿರಿಯ ಸದಸ್ಯರ ಮಾರ್ಗದರ್ಶನದಲ್ಲಿ ಕಾಲೇಜು ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ.
ಪ್ಲೇಸ್ ಮೆಂಟ್ ಸೆಲ್

ಕೌಶಲ್ಯ ಮತ್ತು ಉದ್ಯೋಗ ತರಬೇತಿ ನೀಡುವ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿವಿಧ ಕಾರ್ಯಾಗಾರಗಳನ್ನು ಏರ್ಪಡಿಸಲಾಗುತ್ತಿದೆ. ಮಾತೃಭೂಮಿ ಸೇವಾ ಪ್ರತಿಷ್ಠಾನ, ಕ್ರಿಯೇಟಿವ್ ಕಂಪ್ಯೂಟರ್ಸ್, ಯುವಜಯ ಫೌಂಡೇಶನ್ ಶಿರಸಿ, ದೇಶಪಾಂಡೆ ಸ್ಕಿಲ್ಲಿಂಗ್ ಹಾಗೂ ಗುರುಕುಲ ಸ್ಕಿಲ್ಸ್ ಹುಬ್ಬಳ್ಳಿ ಮುಂತಾದ ಸಂಸ್ಥೆಗಳ ಸಹಕಾರದೊಂದಿಗೆ ಸಿಎ, ಸಿ.ಎಸ್, ಪರೀಕ್ಷಾ ಸಿದ್ಧತೆ, ವೃತ್ತಿಪರ ಕೋರ್ಸ್, ಕೌಶಲ್ಯಾಧಾರಿತ ತರಬೇತಿ ನೀಡಲಾಗುತ್ತಿದೆ.

ನೂರಾರು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದು ಈ ಕೋರ್ಸ್ ಮೂಲಕ ಅನೇಕರು ಪ್ರಸಿದ್ಧ MNC ಗಳಾದ ಟೆಕ್ ಮಹೀಂದ್ರಾ, Capgemini, TCS, Carelon, Accenture, Tata Electronics, ಹಾಗೂ ಇನ್ನಿತರೆ ಪ್ರತಿಷ್ಟಿತ ಕಂಪನಿಗಳಲ್ಲಿ ಉದ್ಯೋಗವನ್ನೂ ಪಡೆದಿದ್ದಾರೆ. ಚಾಣಕ್ಯ ಅಕಾಡೆಮಿ ಧಾರವಾಡ ಇವರ ಸಹಯೋಗದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ಮಾಡುವ ಯೋಜನೆಯನ್ನೂ ಹೊಂದಲಾಗಿದೆ.
ಉದ್ಯೋಗ ಮೇಳ
ಕಾಲೇಜಿನಲ್ಲಿ 2025-26 ನೇ ಸಾಲಿನಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಪಂಚಾಯತ್ ಉತ್ತರ ಕನ್ನಡ ಹಾಗೂ ತಾಲೂಕು ಪಂಚಾಯಿತಿ ಯಲ್ಲಾಪುರ ಮತ್ತು ನಮ್ಮ ಕಾಲೇಜಿನ ಸಹಯೋಗದಲ್ಲಿ ಜಿಲ್ಲಾಮಟ್ಟದ ಉದ್ಯೋಗ ಮೇಳ ನಡೆಸಲಾಗಿದ್ದು, ವಿವಿಧ ಜಿಲ್ಲೆ ತಾಲೂಕುಗಳಿಂದ 1150 ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಸಿದ್ದರು. 297 ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ಉದ್ಯೋಗ ಪತ್ರವನ್ನು ನೀಡಲಾಗಿದೆ.

ಮೆಂಟರಿಂಗ್ ವ್ಯವಸ್ಥೆ:
2025-26 ನೇ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಮೆಂಟರಿಂಗ್ ವ್ಯವಸ್ಥೆ ಪ್ರಾರಂಭಿಸಲಾಗಿದ್ದು ಪ್ರತಿ ಮೆಂಟರ್ ಗಳಿಗೆ 15 ವಿದ್ಯಾರ್ಥಿಗಳ ಶೈಕ್ಷಣಿಕ ಜವಾಬ್ದಾರಿ ವಹಿಸಲಾಗಿದೆ. ಮೆಂಟರ್ ಗಳು ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ವಿದ್ಯಾರ್ಥಿಗಳ ಹಾಜರಾತಿ ಹಾಗೂ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದ್ದಾರೆ.

ಆರೋಗ್ಯ ಕೇಂದ್ರ:

ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಹೊಸದಾಗಿ ಕಾಲೇಜಿನಲ್ಲಿ ಆರೋಗ್ಯ ಕೇಂದ್ರ ಪ್ರಾರಂಭಿಸಿದ್ದು, ಪ್ರತಿ ಬುಧವಾರ ತಾಲೂಕು ಆಸ್ಪತ್ರೆಯ ತಜ್ಞ ವೈದ್ಯರು ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಇದರಿಂದ ಹಲವಾರು ವಿದ್ಯಾರ್ಥಿಗಳು ಪ್ರಯೋಜನ ಪಡೆಯುವಂತಾಗಿದೆ.

ಸಾಂಸ್ಕೃತಿಕ ಚಟುವಟಿಕೆಗಳು:
ಕಾಲೇಜಿನಲ್ಲಿ ವಾರ್ಷಿಕವಾಗಿ ಹಲವಾರು ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ.

ವಿದ್ಯಾರ್ಥಿಗಳಲ್ಲಿ ಹಿಂದಿನ ಕಾಲದ ಸ್ಥಳೀಯ ಸಂಸ್ಕೃತಿಯ ಕುರಿತು ಹೆಚ್ಚಿನ ಅರಿವು ಮೂಡಿಸುವ ಸಲುವಾಗಿ ಜಾನಪದ ಉತ್ಸವದಂತಹ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕಾಲೇಜಿನ ಮುಂಭಾಗದಲ್ಲಿ ಸುಂದರ ಹೂದೋಟ ನಿರ್ಮಿಸಲಾಗಿದೆ.
ಆಧುನಿಕ ಸೌಲಭ್ಯ:
ಕಾಲೇಜು ಎಲ್ಲ ರೀತಿಯ ಸೌಲಭ್ಯಗಳನ್ನು ಹೊಂದಿದ್ದು, ಉತ್ತಮ ಶಿಕ್ಷಣ ನೀಡಲು ಪೂರಕವಾಗಿದೆ. ಸ್ಮಾರ್ಟ್ ಕ್ಲಾಸ್, LMS ಒಪ್ಯಾಕ್ ವ್ಯವಸ್ಥೆಯಿರುವ ಸುಸಜ್ಜಿತ ಗ್ರಂಥಾಲಯ, ಎಸ್.ಸಿ ಎಸ್.ಟಿ ವಿದ್ಯಾರ್ಥಿಗಳಿಗೆ ವಿಶೇಷ ಬುಕ್ ಬ್ಯಾಂಕ್, ವಿದ್ಯಾರ್ಥಿನಿಯರಿಗೆ ವಿಶ್ರಾಂತಿ ಗೃಹ ಮುಂತಾದ ಸೌಕರ್ಯಗಳನ್ನು ಹೊಂದಿದೆ.

ವಿದ್ಯಾರ್ಥಿಗಳಿಗೆ ವಿವಿಧ ವಿದ್ಯಾರ್ಥಿ ವೇತನ ಸೌಲಭ್ಯವೂ ಇದೆ. ಸುಸಜ್ಜಿತ ಕಂಪ್ಯೂಟರ್ ಪ್ರಯೋಗಾಲಯ ವ್ಯವಸ್ಥೆಯಿದ್ದು ಕಾಲೇಜು ನ್ಯಾಕ್ ನಿಂದ ಬಿ ಗ್ರೇಡ್ ಮಾನ್ಯತೆ ಪಡೆದಿದ್ದು ಮುಂದಿನ ಹಂತಕ್ಕೆ ಸಿದ್ಧತೆ ನಡೆಸಿದೆ. ಎಲ್ಲಾ ವಿಷಯಗಳಿಗೂ ನುರಿತ ಉಪನ್ಯಾಸಕರಿದ್ದು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಿದೆ.
ಎನ್.ಎಸ್.ಎಸ್. ಮತ್ತು ರೆಡ್ ಕ್ರಾಸ್ ಘಟಕಗಳು:
ಕಾಲೇಜಿನ ಎನ್.ಎಸ್.ಎಸ್ ಹಾಗು ರೆಡ್ ಕ್ರಾಸ್ ಘಟಕಗಳು ವಿದ್ಯಾರ್ಥಿಗಳಲ್ಲಿ ಸಮಾಜಮುಖಿ ಮನೋಭಾವನೆಗಳನ್ನು ಬೆಳೆಸುತ್ತಿದೆ. ಕಾಲೇಜಿನ ರೆಡ್ ಕ್ರಾಸ್ ಹಾಗೂ KIMS ಸಹಯೋಗದಲ್ಲಿ ಪ್ರತಿವರ್ಷ ರಕ್ತದಾನ ಶಿಬಿರವನ್ನು ಆಯೋಜಿಸಲಾಗುತ್ತದೆ. ಎನ್.ಎಸ್.ಎಸ್ ಹಾಗು ರೆಡ್ ಕ್ರಾಸ್ ಘಟಕಗಳ ಚಟುವಟಿಕೆಗಳು ಕೇವಲ ಕಾಲೇಜಿಗಷ್ಟೇ ಸೀಮಿತವಾಗಿರದೇ ವೃದ್ಧಾಶ್ರಮದಲ್ಲಿ ಆಶ್ರಮ ನಿವಾಸಿಗಳಿಗೆ ಮನೋರಂಜನೆ ಕಾರ್ಯಕ್ರಮ ಹಾಗೂ ಅಗತ್ಯ ವಸ್ತುಗಳನ್ನು ಪೂರೈಸಿ ಉಪಹಾರವನ್ನು ವಿತರಿಸಲಾಗಿದೆ.

ಪಟ್ಟಣದ ವಿವಿಧ ಧಾರ್ಮಿಕ ಕೇಂದ್ರಗಳಿಗೆ ತೆರಳಿ ಎನ್.ಎಸ್.ಎಸ್ ಹಾಗು ರೆಡ್ ಕ್ರಾಸ್ ಸ್ವಚ್ಛತಾ ಕಾರ್ಯವನ್ನು ಮಾಡಿರುತ್ತಾರೆ. ತಾಲೂಕಾ ಆಸ್ಪತ್ರೆಯ ಆವರಣವನ್ನು ಸ್ವಚ್ಛಗೊಳಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಗಿದೆ. ಪ್ರತಿ ವರ್ಷವೂ ಎನ್ ಎಸ್ ಎಸ್ ವತಿಯಿಂದ ತಾಲೂಕಿನ ಆಯ್ದ ಗ್ರಾಮವನ್ನು ದತ್ತು ಪಡೆದು ವಿವಿಧ ರೀತಿಯ ಸ್ವಚ್ಛತಾ ಕಾರ್ಯ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ.
ಕ್ರೀಡಾ ಕ್ಷೇತ್ರದಲ್ಲಿ ಅಪೂರ್ವ ಸಾಧನೆ
ಕ್ರೀಡಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡುತ್ತಿದ್ದಾರೆ. ಭರತ್ ಗೌಳಿ ಬಾಡ್ಮಿಂಟನ್ ಸೌಥ್ ಝೋನ್ ಗೆ ಆಯ್ಕೆಯಾಗಿ ಕಾಲೇಜಿಗೆ ಕೀರ್ತಿ ತಂದಿರುತ್ತಾನೆ.

ಗಣೇಶ್ ದೇವರ್ ಮತ್ತು ಜಿಸ್ ಕಣ್ಣಂಚಿರಾ ವಿಶ್ವವಿದ್ಯಾಲಯದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಹುಮಾನ ಪಡೆದಿರುತ್ತಾರೆ. ಕುಮಾರಿ ನಂದಿತಾ ಭಾಗ್ವತ್ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಯೂನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾಗಿದ್ದಾರೆ.
ಸುಸಜ್ಜಿತ ಪ್ರಯೋಗಾಲಯ
ಹೊಸದಾಗಿ ಪ್ರಾರಂಭವಾದ ಬಿ.ಸಿ.ಎ ವಿದ್ಯಾರ್ಥಿಗಳಿಗೆ ಹಾಗೂ ಬಿ.ಎಸ್ಸಿ ವಿದ್ಯಾರ್ಥಿಗಳಿಗೆ ಸುಸಜ್ಜಿತವಾದ ಕಂಪ್ಯೂಟರ್ ಪ್ರಯೋಗಾಲಯವಿದೆ. 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಎಲ್ಲ ವ್ಯವಸ್ಥೆಗಳ ಸದುಪಯೋಗ ಪಡೆಯುತ್ತಿದ್ದಾರೆ. ಎಂ.ಕಾಂ ಶೇ. 100 ಫಲಿತಾಂಶ ಹಾಗೂ ಬಿ.ಎ ಬಿ.ಕಾಂ, ಬಿ.ಎಸ್ಸಿ ಗಳಲ್ಲಿ ಪ್ರತಿ ಸೆಮಿಸ್ಟರ್ ಗೆ ಶೇ. 90 ಕ್ಕಿಂತ ಹೆಚ್ಚಿನ ಫಲಿತಾಂಶ ಪಡೆಯುತ್ತಿದ್ದಾರೆ.
ಪ್ರವೇಶಾತಿ ಆರಂಭ:
2026-27 ನೇ ಶೈಕ್ಷಣಿಕ ವರ್ಷಕ್ಕೆ ಈ ಕಾಲೇಜಿನಲ್ಲಿ ಪ್ರವೇಶಾತಿ ಆರಂಭವಾಗಿದ್ದು, ಕಳೆದ ವರ್ಷದಿಂದ ಬಿ.ಸಿ.ಎ, ಬಿ.ಎಸ್ಸಿ, ಕೋರ್ಸನ್ನು ಹೊಸದಾಗಿ ಪ್ರಾರಂಭಿಸಲಾಗಿದೆ.

ಅತ್ಯಂತ ಕಡಿಮೆ ಶುಲ್ಕದೊಂದಿಗೆ ವಿದ್ಯಾರ್ಥಿಗಳು ಬಿ.ಸಿ.ಎ ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕಾಲೇಜು AICTE ಮಾನ್ಯತೆ ಪಡೆದಿದ್ದು ಬಿ.ಸಿ.ಎ ಕೋರ್ಸಿಗೆ ಅಗತ್ಯವಿರುವ ಸುಸಜ್ಜಿತ ಕಂಪ್ಯೂಟರ್ ಪ್ರಯೋಗಾಲಯವನ್ನು ಹಾಗೂ ಇತರೆ ಎಲ್ಲಾ ಸೌಕರ್ಯಗಳನ್ನು ಹೊಂದಿದೆ. ಬಿ.ಎ ವಿದ್ಯಾರ್ಥಿಗಳಿಗೆ ಹೊಸದಾಗಿ ಸೈಕಾಲಜಿ, ಕ್ರಿಮಿನಾಲಜಿ, ಜರ್ನಲಿಸಂ ಗಳಂತಹ ವೃತ್ತಿಪರ ವಿಷಯಗಳನ್ನು ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಲಾಗಿದೆ. ಬಿ.ಎ, ಬಿ.ಕಾಂ, ಬಿ.ಎಸ್ಸಿ ಕೋರ್ಸುಗಳಿಗೂ ಪ್ರವೇಶಾತಿ ಆರಂಭವಾಗಿದ್ದು ಪ್ರವೇಶಾತಿ ಭರದಿಂಧ ಸಾಗಿದೆ.
ಸಂಕಲ್ಪ-2026

ಧಾರವಾಡದ ಶ್ರೀ ಜೆ.ಎಸ್.ಎಸ್ ಮಹಾವಿದ್ಯಾಲಯವು ಇತ್ತೀಚೆಗೆ ಆಯೋಜಿಸಿದ್ದ ಸಂಕಲ್ಪ-2026 ರಾಷ್ಟ್ರಮಟ್ಟದ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಬ್ಬದಲ್ಲಿ ನಮ್ಮ ಕಾಲೇಜು ‘ಸಮಗ್ರ ವೀರಾಗ್ರಣಿ ಪ್ರಶಸ್ತಿ’ ಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಸುಮಾರು 160 ಕ್ಕೂ ವಿವಿಧ ಕಾಲೇಜು 800 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಕಾಲೇಜು ಪ್ರಥಮ ಸ್ಥಾನ ಮತ್ತು 30,000 ನಗದು ಪುರಸ್ಕಾರ ಪಡೆದುಕೊಂಡು ಇಲಾಖೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ.

ಮಾದಕ ವ್ಯಸನ ಮುಕ್ತ ವಿರೋಧಿ ಅಭಿಯಾನ:
ಇಂದಿನ ಯುವಜನತೆಯನ್ನು ಆವರಿಸುತ್ತಿರುವ ಮಾದಕ ವ್ಯಸನ ಎಂಬ ಮಾರಣಾಂತಿಕ ಪಿಡುಗನ್ನು ಸಮಾಜದಿಂದ ಬುಡಸಮೇತ ಕಿತ್ತೊಗೆಯುವ ನಿಟ್ಟಿನಲ್ಲಿ, ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಾತೃಭೂಮಿ ಸೇವಾ ಪ್ರತಿಷ್ಠಾನ ಹಾಗೂ ಸ್ಥಳೀಯ ಪೊಲೀಸ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಮಾದಕ ವಸ್ತುಗಳ ವಿರೋಧಿ ಜಾಗೃತಿ ಅಭಿಯಾನ ಅತ್ಯಂತ ಅರ್ಥಪೂರ್ಣವಾಗಿ ಜರುಗಿದೆ.
ಜಾಗೃತಿ ಜಾಥಾದ ಮೂಲಕ ಜಾಗೃತಿ ಕಹಳೆ:

ಕಾಲೇಜಿನಿಂದ ಆರಂಭವಾದ ಬೃಹತ್ ಜಾಗೃತಿ ಜಾಥಾ ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿತು. ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ಇಲ್ಲ ಎನ್ನಿ – ಜೀವನಕ್ಕೆ ಹೌದು ಎನ್ನಿ ಮುಂತಾದ ಫಲಕಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕರಲ್ಲಿ ಈ ಪಿಡುಗಿನ ಗಂಭೀರತೆಯ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಇದೇ ರೀತಿಯ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹಲವು ಜಾಗೃತಿ ಜಾಥಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬೀದಿ ನಾಟಕದ ಮೂಲಕ ಸಾಮಾಜಿಕ ಸಂದೇಶ:
ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಆವರಣದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಮಾದಕ ದ್ರವ್ಯ ಎಂಬ ಭೂತ ಮತ್ತು ಪ್ರಜ್ಞೆ ಎಂಬ ಸಮಾಜ ಎಂಬ ಬೀದಿ ನಾಟಕವು ನೆರೆದಿದ್ದ ನೂರಾರು ಸಾರ್ವಜನಿಕರ ಮನಗೆದ್ದಿದೆ.
ಮೂಲಸೌಕರ್ಯ ಅಭಿವೃದ್ಧಿ :

ಕಾಲೇಜಿನ ಮೂಲಸೌಕರ್ಯ ಅಭಿವೃದ್ಧಿಗಾಗಿ ಶಾಸಕ ಶಿವರಾಮ ಹೆಬ್ಬಾರ ಅವರ ಮೇಲ್ವಿಚಾರಣೆಯಲ್ಲಿ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

ವಾಹನ ನಿಲುಗಡೆ ಕಟ್ಟಡ, ಕ್ಯಾಂಟೀನ್ ಹಾಗೂ ಸಭಾಂಗಣ ನಿರ್ಮಾಣ ಕಾರ್ಯಗಳು ಪೂರ್ಣಗೊಂಡಿದ್ದು, ಮುಂದಿನ ಒಂದು ತಿಂಗಳೊಳಗೆ ಅವುಗಳನ್ನು ಉದ್ಘಾಟಿಸಲು ಯೋಜಿಸಲಾಗಿದೆ.

ಒಟ್ಟಿನಲ್ಲಿ ಅಗತ್ಯವಾದ ಮೂಲ ಸೌಕರ್ಯಗಳೊಂದಿಗೆ ಶ್ರೇಷ್ಠ ಗುಣಮಟ್ಟದ, ಅತ್ಯುತ್ತಮ, ಕೌಶಲ್ಯಪೂರ್ಣ ಶಿಕ್ಷಣವು ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಲಭ್ಯವಿದೆ. ಆಸಕ್ತರು ಈ ಸೌಲಭ್ಯದ ಸದುಪಯೋಗ ಪಡೆಯಬಹುದು.

===========================


























